ಭುವನೇಶ್ಚವರ್ (ಒಡಿಶಾ):ಭಾರತದ ಅಗ್ರ ಶಾಟ್‌ಪುಟ್ ಪಟು ತೇಜಿಂದರ್ ಪಾಲ್ ಸಿಂಗ್ ತೂರ್ ಸೋಮವಾರ ಮತ್ತೊಮ್ಮೆ ದಾಖಲೆ ನಿರ್ಮಿಸಿದ್ದಾರೆ. ಭುವನೇಶ್ವರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಅಂತರ ರಾಜ್ಯ ಚಾಂಪಿಯನ್‌ಷಿಪ್‌ನ ಅಂತಿಮ ದಿನದಂದು ಶಾಟ್‌ಪುಟ್ ಬಾಲ್ ಅನ್ನು 21.77 ಮೀಟರ್ ದೂರ ಎಸೆದು ತಮ್ಮದೇ ಹೆಸರಲ್ಲಿದ್ದ ಹಳೆಯ ಏಷ್ಯನ್ ದಾಖಲೆಯನ್ನು ಮುರಿದು ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದರು.
ಪಂಜಾಬ್ ಅನ್ನು ಪ್ರತಿನಿಧಿಸುವ 28 ವರ್ಷದ ತೇಜಿಂದರ್ ಪಾಲ್ 2021ರಲ್ಲಿ ಪಟಿಯಾಲದಲ್ಲಿ ನಡೆದ ಶಾಟ್‌ಪುಟ್ ಪಂದ್ಯವಳಿಯಲ್ಲಿ 21.49 ಮೀ ದೂರ ಎಸೆದು ಏಷ್ಯನ್ ದಾಖಲೆಯನ್ನು ನಿರ್ಮಿಸಿದ್ದರು. ಇದೀಗ ಕಳಿಂಗ ಸ್ಟೇಡಿಯಂನಲ್ಲಿ ನಡೆದ ಶಾಟ್ಪುಟ್ನ ಮೂರನೇ ಎಸೆತದಲ್ಲಿ 21.77ಮೀ ದೂರ ಎಸೆದು ದಾಖಲೆ ನಿರ್ಮಿಸಿದ್ದಾರೆ. ಜೊತೆಗೆ ಈ ಋತುವಿನಲ್ಲಿ ವಿಶ್ವದ ಒಂಬತ್ತನೇ ಅತ್ಯುತ್ತಮ ಪ್ರದರ್ಶನ ಇದಾಗಿದೆ.
ವಿಶ್ವ ಚಾಂಪಿಯನ್‌ಶಿಪ್‌ನ ಅರ್ಹತಾ ಥ್ರೋ 21.40 ಮೀ, ಜೊತೆಗೆ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯಲು 19 ಮೀ. ಥ್ರೋ ನಿಗದಿ ಪಡಿಸಲಾಗಿತ್ತು. ಮೂರನೇ ಸುತ್ತಿನಲ್ಲಿ 21.77 ಥ್ರೋ ಮೂಲಕ ಅವರು ಈ ಎರಡು ಪಂದ್ಯಾವಳಿಗಳಿಗೆ ಅರ್ಹತೆ ಪಡೆದಿದ್ದಾರೆ.
ಏಷ್ಯನ್ ಗೆಮ್ಸ್ ಚಿನ್ನದ ಪದಕ ವಿಜೇತ ತೇಜಿಂದರ್ ತಮ್ಮ ಆರಂಭಿಕ ಥ್ರೋ 21.09 ಮೀ ಮೂಲಕ ಮೊದಲ ಸುತ್ತಿನಲ್ಲೇ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದರು. ಬಳಿಕ ತಮ್ಮದೆ ಏಷ್ಯನ್ ದಾಖಲೆ ಮುರಿಯಲು ಎರಡನೇ ಥ್ರೋನಲ್ಲಿ ಪ್ರಯತ್ನಿಸಿದರು. ಆದರೆ, ಎರಡನೇ ಎಸೆತವು ಫೌಲ್ ಆಯಿತು. ಅಂತಿಮವಾಗಿ ಮೂರನೇ ಪ್ರಯತ್ನದಲ್ಲಿ ತಮ್ಮ ಹಿಂದಿನ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾದರು. ಕರಣ್ವೀರ್ ಸಿಂಗ್ 19.78ಮೀ ಥ್ರೋ ಮೂಲಕ ಎರಡನೇ ಸ್ಥಾನ ಪಡೆದು ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದರು.
ಈ ಬಗ್ಗೆ ಪ್ರತಿಕ್ರಿಯಿಸಿದ ತೇಜಿಂದರ್ ತೂರ್, "ತರಬೇತಿ ವೇಳೆ 21.49 ಮೀ ದೂ ಥ್ರೋ ಮಾಡಲು ರೂಪಿಸಿಕೊಂಡಿದ್ದ ಯೋಜನೆ ಯಶಸ್ವಿಯಾಗಿದೆ. ನನ್ನ ಮುಂದಿನ ಯೋಜನೆ 22 ಮೀ ದೂರದ ಥ್ರೋ ಆಗಿದೆ" ಎಂದು ತಮ್ಮ ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಮತ್ತೊಂದೆಡೆ 100 ಮೀ ಹರ್ಡಲ್ಸ್‌ನಲ್ಲಿ ಜ್ಯೋತಿ ಯರ್ರಾಜಿ ಚಿನ್ನದ ಪದಕ ಗೆದ್ದ ಟೂರ್ನಿಯ ಅತ್ಯುತ್ತಮ ಮಹಿಳಾ ಅಥ್ಲೀಟ್ ಆಗಿ ಹೊರಹೊಮ್ಮಿದರು.