ನವದೆಹಲಿ:ಕೋರಿಯಾದ ಚಾಂಗ್ವಾನ್ನಲ್ಲಿ ನಡೆಯುತ್ತಿರುವ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 50 ಮೀಟರ್ ರೈಫಲ್ 3ಪಿ ಈವೆಂಟ್ನಲ್ಲಿ ಶ್ರೀಯಾಂಕಾ ಸಡಂಗಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಮುಂದಿನ ವರ್ಷ ಪ್ಯಾರಿಸ್ನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.
ಕಠಿಣ ಪೈಪೋಟಿ ನೀಡಿದ ಶ್ರೀಯಾಂಕಾ 440.5 ಅಂಕಗಳೊಂದಿಗೆ ಪದಕದಿಂದ ವಂಚಿತರಾಗಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ಈ ಸ್ಪರ್ಧೆಯಲ್ಲಿ ಕೊರಿಯಾದ ಅನುಭವಿ ಶೂಟರ್ ಲೀ ಯುನ್ಸೆಯೊ ಚಿನ್ನದ ಪದಕ ಪಡೆದಕ್ಕೆ ಮುತ್ತಿಕ್ಕಿದರೆ, ಚೀನಾದ ಹಾನ್ ಜಿಯಾಯು ಮತ್ತು ಕ್ಸಿಯಾಸಿಯು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು.
ಮತ್ತೊಂದೆಡೆ ಒಲಿಂಪಿಕ್ ಅರ್ಹತೆಗಾಗಿ ನೆಡೆದ ಸ್ಪರ್ಧೆಯಲ್ಲಿ ಭಾರತೀಯ ಮಹಿಳಾ ಶೂಟರ್‌ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಸಿಫ್ಟ್ ಕೌರ್ ಸಮ್ರಾ ಅರ್ಹತಾ ಸುತ್ತಿನಲ್ಲಿ 592 ಅಂಕಗಳನ್ನು ಪಡೆದು ಅಗ್ರಸ್ಥಾನಕ್ಕೆ ಏರಿದರೆ, ಆಶಿ ಚೌಕ್ಸೆ 591 ಅಂಕಗಳಿಸಿ ಎರಡನೇ ಸ್ಥಾನ ಪಡೆದರು. ಶ್ರೀಯಾಂಕಾ ಮತ್ತು ಆಯುಷಿ ಕ್ರಮವಾಗಿ 588 ಮತ್ತು 587 ಅಂಕಗಳೊಂದಿಗೆ ಅಗ್ರ ಎಂಟರಲ್ಲಿ ಸ್ಥಾನ ಪಡೆದರು. ಮಾನಿನಿ ಕೌಶಿಕ್, ಶೂಟಿಂಗ್ 586 ಅಂಕದೊಂದಿಗೆ 10ನೇ ಸ್ಥಾನ ಪಡೆಯುವ ಮೂಲಕ ಮುಂದಿನ ಒಲಿಂಪಿಕ್ಸ್‌ಗೆ ತಮ್ಮ ಸ್ಥಾನವನ್ನು ಖಚಿತ ಪಡಿಸಿಕೊಂಡರು.