ಅಮ್ಮನ್(ಜೋರ್ಡಾನ್):ಜೋರ್ಡಾನ್‌ನ ಅಮ್ಮನ್‌ನಲ್ಲಿ ಶನಿವಾರ ನಡೆದ ಎಎಸ್‌ಬಿಸಿ ಏಷ್ಯನ್ ಎಲೈಟ್ ಬಾಕ್ಸಿಂಗ್ 2022 ಚಾಂಪಿಯನ್ಶಿಪ್ನಲ್ಲಿ ಭಾರತದ ಸ್ಟಾರ್ ಬಾಕ್ಸರ್ ಶಿವ ಥಾಪಾ ಐತಿಹಾಸಿಕ ಬೆಳ್ಳಿ ಪದಕ ಜಯಿಸಿದ್ದಾರೆ. ಭಾರತದ ಬಾಕ್ಸರ್‌ಗಳು ಒಟ್ಟಾರೆ 12 ಪದಕಗಳೊಂದಿಗೆ ಅದ್ಭುತ ಅಭಿಯಾನ ಮುಗಿಸಿದರು.
ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಗುವಾಹಟಿಯ ಬಾಕ್ಸರ್ ಥಾಪಾ ಅವರಿಗಿದು ಮೂರನೇ ಬೆಳ್ಳಿ ಮತ್ತು ಒಟ್ಟಾರೆ ಆರನೇ ಪದಕವಾಗಿದೆ. ಈ ಮೂಲಕ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಥಾಪಾ ಅತ್ಯಂತ ಯಶಸ್ವಿ ಪುರುಷ ಪ್ಯೂಜಿಲಿಸ್ಟ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಹಿಂದೆ 2017 ಮತ್ತು 2021ರಲ್ಲಿ ಅವರು ಬೆಳ್ಳಿ ಪದಕ ಜಯಿಸಿದ್ದರು. 2013ರ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಥಾಪಾ, 2015 ಮತ್ತು 2019ರಲ್ಲಿ ಕಂಚಿನ ಪದಕಗಳಿಗೆ ಕೊರಳೊಡ್ಡಿದ್ದರು.
ಪುರುಷರ 63.5 ಕೆಜಿ ಫೈನಲ್‌ನಲ್ಲಿ ಉಜ್ಬೇಕಿಸ್ತಾನ್‌ನ ಅಬ್ದುಲ್ಲೇವ್ ರುಸ್ಲಾನ್ ವಿರುದ್ಧ ಥಾಪಾ ಎಚ್ಚರಿಕೆಯ ಆರಂಭ ಮಾಡಿದರು. ಪಂದ್ಯವು ಮುಂದುವರೆದಂತೆ ಆತ್ಮವಿಶ್ವಾಸದಿಂದ ಮುನ್ನುಗ್ಗಿದ ಅವರಿಗೆ ಚಿನ್ನ ಗೆಲ್ಲಲು ಸಾಧ್ಯವಾಗಲಿಲ್ಲ. ಚಿನ್ನದ ಬೇಟೆಗೆ ಕಾದಾಡಿದ ಅವರ ಕನಸಿಗೆ ಗಾಯವು ತಣ್ಣೀರೆರಚಿತು. ಪಂದ್ಯದ ಎರಡನೇ ಸುತ್ತಿನಲ್ಲಿ ಬಲ ಮೊಣಕಾಲಿಗೆ ಗಾಯವಾದ ಕಾರಣ ಚಿನ್ನದ ಪದಕದಿಂದ ವಂಚಿತರಾದರು. ಪಂದ್ಯದಲ್ಲಿ ಮುಂದುವರಿಯುವ ಸ್ಥಿತಿ ಇಲ್ಲದ ಕಾರಣ ಆರ್ಎಸ್ಸಿ(RSC) ತೀರ್ಪಿನೊಂದಿಗೆ ರೆಫರಿಗಳು ಉಜ್ಬೇಕಿಸ್ತಾನ್‌ನ ಅಬ್ದುಲ್ಲೇವ್ ರುಸ್ಲಾನ್ ಅವರನ್ನು ವಿಜೇತ ಎಂದು ಘೋಷಿಸಿದರು.