ಶಾಂಘೈ (ಚೈನಾ):ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಜಯಿಸಿದ ಭಾರತದ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಎಟಿಪಿ ಪುರುಷರ ಡಬಲ್ಸ್ ಫೈನಲ್‌ನಲ್ಲಿ ರನ್ನರ್‌ಅಪ್ ಆದರು. ಭಾನುವಾರ ಶಾಂಘೈನ ಕಿಝೋಂಗ್ ಫಾರೆಸ್ಟ್ ಸ್ಪೋರ್ಟ್ಸ್ ಸಿಟಿ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯಾದ ಪಾಲುದಾರ ಮ್ಯಾಥ್ಯೂ ಎಬ್ಡೆನ್ ಅವರು ಸ್ಪೇನ್‌ನ ಮಾರ್ಸೆಲ್ ಗ್ರಾನೊಲ್ಲರ್ಸ್ ಮತ್ತು ಅರ್ಜೆಂಟೀನಾದ ಹೊರಾಸಿಯೊ ಜೆಬಾಲ್ಲೋಸ್ ವಿರುದ್ಧ 7-5, 2-6, 7-10 ರಿಂದ ಸೋಲನುಭವಿಸಿದರು.
ಇಂಡೋ-ಆಸ್ಟ್ರೇಲಿಯನ್ ಜೋಡಿಯು ಗ್ರಾನೋಲ್ಲರ್ಸ್ ಮತ್ತು ಜೆಬಾಲ್ಲೋಸ್ಗೆ ಕಠಿಣ ಪೈಪೋಟಿ ನೀಡಿದರು. ಮೊದಲ ಸೆಟ್‌ನಲ್ಲಿ ಉತ್ತಮ ಆರಂಭ ಪಡೆದು, ನಂತರ ಎರಡು ಸೆಟ್‌ನಲ್ಲಿ ಎಡವಿದ್ದರಿಂದ ಮಣಿದರು. ಮೊದಲ ಸೆಟ್‌ನಲ್ಲಿ ಎರಡೂ ತಂಡ ಸರ್ವ್ ಕಾಪಾಡಿಕೊಂಡು ಅಂಕ ಬಿಟ್ಟುಕೊಡಲಿಲ್ಲ. 12 ಗೇಮ್ನ ನಂತರ ರೋಹನ್ ಮತ್ತು ಎಬ್ಡೆನ್ ನಿರ್ಣಾಯಕ ಬ್ರೇಕ್ ಪಾಯಿಂಟ್ ಪಡೆದು ಮುನ್ನಡೆ ಸಾಧಿಸಿದರು.
ಆದರೆ ಸ್ಪ್ಯಾನಿಷ್-ಅರ್ಜೆಂಟೀನಾ ಜೋಡಿ ವೇಗವಾಗಿ ಕಮ್ಬ್ಯಾಕ್ ಮಾಡಿದರು. ಮೊದಲ ಸೆಟ್ ಕಳೆದುಕೊಂಡರೂ ಆತ್ಮವಿಶ್ವಾಸ ಕಳೆದುಕೊಳ್ಳದೇ ಎರಡನೇ ಸೆಟ್‌ನಲ್ಲಿ 4-0 ಮುನ್ನಡೆ ಸಾಧಿಸಿದರು. ಹಾಗೆಯೇ ಸೆಟ್ ಅನ್ನು 6-2 ರಿಂದ ಗೆದ್ದರು. ಈ ಮೂಲಕ ಪಂದ್ಯ ಡ್ರಾ ಮಾಡಿಕೊಂಡರು. ಮೂರನೇ ಮತ್ತು ನಿರ್ಣಾಯಕ ಸೆಟ್‌ನಲ್ಲಿ ಸಮಬಲದ ಹೋರಾಟ ಕಂಡುಬಂದರೂ ಸ್ಪ್ಯಾನಿಷ್-ಅರ್ಜೆಂಟೀನಾ ಜೋಡಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಇದರಿಂದ 10-7 ರಿಂದ ಸೆಟ್ ವಶಪಡಿಸಿಕೊಂಡು ವಿಜಯಮಾಲೆ ಧರಿಸಿದರು.