ನವದೆಹಲಿ: ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್)ನ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಶಾಜಿ ಪ್ರಭಾಕರನ್ ಶನಿವಾರ ನೇಮಕಗೊಂಡಿದ್ದಾರೆ. ಎಐಎಫ್‌ಎಫ್‌ನ ಹೊಸದಾಗಿ ರಚಿಸಲಾದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಪ್ರಭಾಕರನ್ ಅವರನ್ನು ಆಯ್ಕೆ ಮಾಡಲಾಗಿದೆ.
ದೆಹಲಿ ಫುಟ್ಬಾಲ್ ಅಧ್ಯಕ್ಷರಾದ ಶಾಜಿ ಪ್ರಭಾಕರನ್ ಬಗ್ಗೆ ಆಯ್ಕೆಯ ನಿರೀಕ್ಷೆ ಇತ್ತು. ಅಂತೆಯೇ ಎಐಎಫ್‌ಎಫ್‌ನ ಚುಕ್ಕಾಣಿ ಹಿಡಿದಿರುವ ಅಧ್ಯಕ್ಷ ಕಲ್ಯಾಣ್ ಚೌಬೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಭಾಕರನ್ ಆಯ್ಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು.
ಎಐಎಫ್‌ಎಫ್‌ನ ನೂತನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪ್ರಭಾಕರನ್ ಹೆಸರನ್ನು ಅಧ್ಯಕ್ಷ ಕಲ್ಯಾಣ್ ಚೌಬೆ ಪ್ರಸ್ತಾಪಿಸಿದರು. ಇದನ್ನು ಎಲ್ಲ ಸದಸ್ಯರು ಸರ್ವಾನುಮತದಿಂದ ಅನುಮೋದಿಸಿದರು ಎಂದು ಎಐಎಫ್‌ಎಫ್ ಪ್ರಕಟಣೆಯಲ್ಲಿ ತಿಳಿಸಿದೆ.
ಎಐಎಫ್‌ಎಫ್‌ನ ಕಾರ್ಯಚಟುವಟಿಕೆಯಲ್ಲಿ ಬದಲಾವಣೆ ಬಯಸಿದವರಲ್ಲಿ ಪ್ರಭಾಕರನ್ ಮುಂಚೂಣಿಯಲ್ಲಿದ್ದರು. ಆದರೆ, ಶುಕ್ರವಾರವಷ್ಟೇ ನಡೆದ ಅಪೆಕ್ಸ್ ಬಾಡಿ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. 85 ವರ್ಷಗಳ ಫೆಡರೇಶನ್‌ಗೆ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಆಟಗಾರ ಎಂಬ ಖ್ಯಾತಿಗೆ ಚೌಬೆ ಪಾತ್ರರಾಗಿದ್ದಾರೆ.
ಇಂದು ನಡೆದ ಮೊದಲ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ನ ಆದೇಶದಂತೆ ಆರು ಜನ ಮಾಜಿ ಖ್ಯಾತ ಆಟಗಾರರು ಸಮಿತಿಯ ಭಾಗವಾಗಿರುವುದು ಇದೇ ಮೊದಲು. ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಮತ್ತು ಯಾವುದೇ ಸಮಯದಲ್ಲಿ ಯಾವುದೇ ವೈಯಕ್ತಿಕ ಅಹಂಕಾರವು ಭಾರತೀಯ ಫುಟ್ಬಾಲ್ನ್ನು ಒಟ್ಟಿಗೆ ಮುನ್ನಡೆಸುವ ನಮ್ಮ ಪ್ರಯತ್ನಕ್ಕೆ ಅಡ್ಡಿಯಾಗಬಾರದು. ಶಿಸ್ತು ಯಶಸ್ಸಿನ ಕೀಲಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಟೆನ್ನಿಸ್ಗೆ ವಿದಾಯ ಹೇಳಿದ 23 ಗ್ರ್ಯಾಂಡ್ ಸ್ಲಾಮ್ ಒಡತಿ ಸೆರೆನಾ.. ಯುಎಸ್ ಓಪನ್ ಟೂರ್ನಿ ಸೋತು ಗುಡ್ಬೈ