ಶಹದೋಲ್(ಮಧ್ಯಪ್ರದೇಶ):ದೇಶದಲ್ಲಿ ಕ್ರಿಕೆಟ್ಗಿರುವ ಕ್ರೇಜ್ ಯಾವುದೇ ಕ್ರೀಡೆಗಿಲ್ಲ. ಕ್ರಿಕೆಟ್ ದೇಶದಲ್ಲೇ ನಡೆಯಲಿ, ವಿದೇಶದಲ್ಲೇ ಆಗಲಿ ಅದರ ಖ್ಯಾತಿಗೆ ಭಂಗವಿಲ್ಲ. ಆದರೆ, ಈ ಗ್ರಾಮದ ಯುವಕ, ಯುವತಿಯರಿಗೆ ಕ್ರಿಕೆಟ್ ಗೀಳು ಅಂಟಿಕೊಂಡಿಲ್ಲ. ಬದಲಾಗಿ ಫುಟ್ಬಾಲ್ ಆಟ ಇಲ್ಲಿ ಮನೆ ಮನೆಗೆ ಹರಡಿದೆ. ಅದರಲ್ಲೂ ಹುಡುಗಿಯರೇ ಹೆಚ್ಚಿರುವುದು ಕ್ರೀಡೆಯ ಸೊಬಗು ಹೆಚ್ಚಿಸಿದೆ.
ಹೌದು, ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ವಿಚಾರಪುರ ಗ್ರಾಮವೇ ಹುಡುಗಿಯರ ಫುಟ್ಬಾಲ್ನಿಂದಾಗಿ ಹೆಸರು ಪಡೆದಿದೆ. ಗ್ರಾಮದ ಯುವಕ- ಯುವತಿಯರು ಫುಟ್ಬಾಲ್ಗೆ ನೀಡುವಷ್ಟು ಮನ್ನಣೆ ಯಾವ ಕ್ರೀಡೆಗೂ ನೀಡಿಲ್ಲ.
ಪ್ರತಿ ಮನೆಯಲ್ಲಿದ್ದಾರೆ ರಾಷ್ಟ್ರೀಯ ಆಟಗಾರರು:ವಿಚಾರಪುರ ಗ್ರಾಮದ ಪ್ರತಿ ಮನೆಯಲ್ಲಿ ರಾಷ್ಟ್ರೀಯ ಫುಟ್ಬಾಲ್ ಆಟಗಾರ್ತಿಯರಿದ್ದಾರೆ. ಕೆಲ ಆಟಗಾರರು ಒಂದಲ್ಲ ಎರಡಲ್ಲ 10 ಕ್ಕೂ ಹೆಚ್ಚು ಬಾರಿ ರಾಷ್ಟ್ರಮಟ್ಟದಲ್ಲಿ ಆಡಿದ್ದಾರೆ. ಹುಡುಗಿಯರು, ಹುಡುಗರು ಸೇರಿ 30 ರಾಷ್ಟ್ರೀಯ ಫುಟ್ಬಾಲ್ ಆಟಗಾರರಿದ್ದಾರೆ. ಅದರಲ್ಲಿ ಹುಡುಗಿಯರದ್ದೇ ಸಂಖ್ಯೆ ಹೆಚ್ಚು ಎಂಬುದು ವಿಶೇಷ. ಬೆಳಗಾದರೆ ಸಾಕು ಎಲ್ಲ ಹುಡುಗಿಯರು ಮೈದಾನದಲ್ಲಿ ಹಾಜರಾಗಿ ಕಾಲ್ಚೆಂಡಿನ ಜೊತೆಗೆ ಕಸರತ್ತು ನಡೆಸುತ್ತಾರೆ.