ನವದೆಹಲಿ:ಇಲ್ಲಿನ ಜಂತರ್ಮಂತರ್ನಲ್ಲಿ ಪ್ರತಿಭಟನಾನಿರತ ಕುಸ್ತಿಪಟುಗಳು ಮತ್ತು ಪೊಲೀಸ್ ಸಿಬ್ಬಂದಿ ಮಧ್ಯೆ ಕಳೆದ ರಾತ್ರಿ ಹೊಡೆದಾಟ ನಡೆದಿದೆ. ಇಬ್ಬರು ಕುಸ್ತಿಪಟುಗಳ ತಲೆಗೆ ಗಾಯವಾಗಿದೆ. ಪೊಲೀಸರು ತಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಕುಸ್ತಿಪಟುಗಳು ಆರೋಪಿಸಿದ್ದಾರೆ.
ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಭಟನಾನಿರತ ಕುಸ್ತಿಪಟುಗಳು ಆರೋಪಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಘಟನೆಯ ನಂತರ ಕಾಂಗ್ರೆಸ್ ನಾಯಕ ದೀಪೇಂದರ್ ಹೂಡಾ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಸೋಮನಾಥ್ ಭಾರ್ತಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ, ಬಿಜೆಪಿ ಸಂಸದರೂ ಆಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಕುಸ್ತಿಪಟುಗಳು ಏಪ್ರಿಲ್ 23 ರಿಂದ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿ ಮಲಗುವ ಹಾಸಿಗೆಯ ವಿಚಾರಕ್ಕಾಗಿ ಗಲಾಟೆ ನಡೆದಿದ್ದು, ಪೊಲೀಸರು ಕುಸ್ತಿಪಟುಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. "ಕುಡಿದ ಮತ್ತಿನಲ್ಲಿದ್ದ ಪೊಲೀಸ್ ಅಧಿಕಾರಿ ಕುಸ್ತಿಪಟುಗಳ ಜೊತೆಗೆ ಕಟುವಾಗಿ ವರ್ತಿಸಿದ್ದಾನೆ. ಹಾಸಿಗೆಗಳನ್ನು ಪಡೆದುಕೊಳ್ಳುತ್ತಿರುವ ಅಲ್ಲಿಗೆ ಬಂದ ಅಧಿಕಾರಿ ಅನುಮತಿಯಿಲ್ಲದೇ ನೀಡಲು ಸಾಧ್ಯವಿಲ್ಲ ಎಂದು ಕಿರಿಕ್ ತೆಗೆದಿದ್ದಾನೆ. ಈ ವೇಳೆ ಮಹಿಳಾ ಕುಸ್ತಿಪಟುಗಳೂ ಎನ್ನದೇ ಅವರನ್ನು ದೂಡಿದ್ದಾನೆ. ಈ ವೇಳೆ ಇತರೆ ಪೊಲೀಸ್ ಸಿಬ್ಬಂದಿ ಮೂಕ ಪ್ರೇಕ್ಷಕರಾಗಿದ್ದರು" ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
"ಸಿಬ್ಬಂದಿ ಬೇಕಂತಲೇ ನಮಗೆ ಕಿರುಕುಳ ನೀಡುತ್ತಿದ್ದಾರೆ. ಪೊಲೀಸರು ನಮ್ಮ ವಿರುದ್ಧ ಈ ರೀತಿ ವರ್ತಿಸಲು ನಾವೇನು ಅಪರಾಧಿಗಳಲ್ಲ. ಮಹಿಳಾ ಪೊಲೀಸರು ಸ್ಥಳದಲ್ಲಿ ಇಲ್ಲ. ನನ್ನನ್ನು ತಳ್ಳಿ, ನಿಂದಿಸಲಾಗಿದೆ" ಎಂದು ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ದೂರಿದರು.
ಪೊಲೀಸ್ ಉಪ ಆಯುಕ್ತ ಪ್ರಣವ್ ತಯಾಲ್ ಮಾತನಾಡಿ, "ಆಪ್ ಶಾಸಕ ಸೋಮಶೇಖರ್ ಭಾರ್ತಿ ಅವರು ಅನುಮತಿಯಿಲ್ಲದೇ, ಕುಸ್ತಿಪಟುಗಳಿಗೆ ಮಲಗುವ ಹಾಸಿಗೆಗಳನ್ನು ನೀಡಲು ಬಂದರು. ಇದನ್ನು ತಡೆಯುವ ವೇಳೆ ಗಲಾಟೆ ನಡೆದಿದೆ. ಕುಡಿದು ದೌರ್ಜನ್ಯ ಎಸಗಲಾಗುತ್ತಿದೆ ಎಂಬ ಆರೋಪ ಸುಳ್ಳು. ಪ್ರತಿಭಟನಾ ಸ್ಥಳದ ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಯಾರನ್ನೂ ಒಳಗೆ ಬಿಡಲಾಗುತ್ತಿಲ್ಲ" ಎಂದರು.
ಪೊಲೀಸರ ವಿರುದ್ಧ ಆರೋಪ ಮಾಡಿದ ಮಾಜಿ ಕುಸ್ತಿಪಟು ರಾಜ್‌ವೀರ್, "ಮಳೆಯಿಂದಾಗಿ ನಮ್ಮ ಹಾಸಿಗೆಗಳು ಒದ್ದೆಯಾಗಿವೆ. ಆದ್ದರಿಂದ ನಾವು ಮಲಗಲು ಮಡಚುವ ಹಾಸಿಗೆಗಳನ್ನು ತರುತ್ತಿದ್ದೆವು. ಆದರೆ, ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಕುಡಿದ ಅಮಲಿನಲ್ಲಿದ್ದ ಪೊಲೀಸ್ ಅಧಿಕಾರಿ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್‌ರನ್ನು ನಿಂದಿಸಿ, ದೂಡಿದರು. ನಮ್ಮ ಮೇಲೂ ಹಲ್ಲೆ ಮಾಡಿದರು" ಎಂದು ದೂರಿದರು.
ಪಿ.ಟಿ.ಉಷಾ ಬೆಂಬಲ:ಇದಕ್ಕೂ ಮೊದಲು ನಿನ್ನೆ ಬೆಳಗ್ಗೆ ಪ್ರತಿಭಟನಾನಿರತ ಕುಸ್ತಿಪಟುಗಳನ್ನು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಪಿ.ಟಿ.ಉಷಾ ಅವರು ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಜಂತರ್ಮಂತರ್ಗೆ ಆಗಮಿಸಿದ್ದ ಅವರು ಕುಸ್ತಿಪಟುಗಳೊಂದಿಗೆ ಮಾತುಕತೆ ನಡೆಸಿ ಅಗತ್ಯ ನೆರವು ನೀಡುವುದಾಗಿ ಭರವಸೆ ಕೊಟ್ಟರು.
ಕುಸ್ತಿಪಟುಗಳು ಮಾಡುತ್ತಿರುವ ಪ್ರತಿಭಟನೆ ದೇಶದ ಮಾನ ಹರಾಜು ಹಾಕುತ್ತಿದೆ ಎಂದು ಪಿ.ಟಿ.ಉಷಾ ಅವರ ಹೇಳಿದ್ದಾಗಿ ವರದಿಯಾಗಿತ್ತು. ಆದರೆ, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ. ಕುಸ್ತಿಪಟುಗಳಿಗೆ ನಮ್ಮ ಬೆಂಬಲವಿದೆ ಎಂದು ಸಮರ್ಥಿಸಿಕೊಂಡಿದ್ದರು.
ಪ್ರಕರಣವೇನು?:ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ ಕೆಲವು ದಿನಗಳಿಂದ ಖ್ಯಾತ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಸೇರಿದಂತೆ ಹಲವು ಕುಸ್ತಿಪಟುಗಳು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಈ ಕುಸ್ತಿಪಟುಗಳಿಗೆ ಇತರ ಕ್ರೀಡಾ ಪಟುಗಳು ಬೆಂಬಲ ಸೂಚಿಸಿದ್ದಾರೆ. ಸಂಸತ್ರಸ್ತರಲ್ಲಿ ಒಬ್ಬರು ಅಪ್ರಾಪ್ತರಾಗಿದ್ದು, ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರ ದೆಹಲಿ ಪೊಲೀಸರು ಶುಕ್ರವಾರ ಡಬ್ಲ್ಯುಎಫ್‌ಐ ಅಧ್ಯಕ್ಷರ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.
ಇದನ್ನೂ ಓದಿ:ಪ್ರತಿಭಟನಾ ನಿರತ ಕುಸ್ತಿಪಟುಗಳ ಭೇಟಿಯಾದ ಐಒಎ ಅಧ್ಯಕ್ಷೆ : ನ್ಯಾಯ ಒದಗಿಸುವ ಭರವಸೆ ನೀಡಿದ ಪಿಟಿ ಉಷಾ