ಲುಸೈಲ್(ಕತಾರ್):ಕ್ರೀಡೆಯೇ ಹಾಗೆ. ಎಷ್ಟೇ ಬಲಿಷ್ಠ ತಂಡವಾಗಿದ್ದರೂ ಎದುರಾಳಿ ಆಟಗಾರರ ಚಾಕಚಕ್ಯತೆಗೆ ಸೋಲಲೇಬೇಕು. ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ನಲ್ಲಿಂದು ಲುಸೈಲ್ ಮೈದಾನದಲ್ಲಿ ನಡೆದ ಸೌದಿ ಅರೇಬಿಯಾ ಮತ್ತು ಅರ್ಜೆಂಟೀನಾ ನಡುವಿನ ಪಂದ್ಯ ಇಂಥದ್ದೇ ಫಲಿತಾಂಶಕ್ಕೆ ಕಾರಣವಾಗಿದೆ.
ವಿಶ್ವಕಪ್ ಗೆಲ್ಲುವ ಫೆವರೇಟ್ ತಂಡಗಳಲ್ಲಿ ಒಂದಾಗಿ ಕದನಕ್ಕಿಳಿದಿರುವ, ವಿಶ್ವಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿ ಒಳಗೊಂಡಿರುವ ಅರ್ಜೆಂಟೀನಾಗೆ 51 ನೇ ಶ್ರೇಯಾಂಕದ ಸೌದಿ ಅರೇಬಿಯಾ ತಂಡ 1-2 ಗೋಲುಗಳಿಂದ ಸೋಲಿಸಿ ಅರಗಿಸಿಕೊಳ್ಳಲಾಗದ ಪೆಟ್ಟು ನೀಡಿದೆ.
ಈ ವಿಶ್ವಕಪ್ನ 3 ನೇ ಶ್ರೇಯಾಂಕ ಹೊಂದಿರುವ ಅರ್ಜೆಂಟೀನಾ ತಂಡ ಪಂದ್ಯ ಗೆಲ್ಲುವ ಹುಮ್ಮಸ್ಸಿನಲ್ಲಿ ಮೈದಾನಕ್ಕಿಳಿಯಿತು. ಪಂದ್ಯ ಆರಂಭವಾದ 10 ನಿಮಿಷದಲ್ಲೇ ಲಿಯೋನೆಲ್ ಮೆಸ್ಸಿ ತಮ್ಮ ಕಾಲ್ಚಳಕದಿಂದ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ತಂಡಕ್ಕೆ 1-0 ಮುನ್ನಡೆ ಸಾಧಿಸಿಕೊಟ್ಟರು. ಬಳಿಕ 3 ಗೋಲು ಗಳಿಸಿದರೂ ಆಫ್ಸೈಡ್ ಆಗಿದ್ದ ಕಾರಣ ಅವುಗಳನ್ನು ಅಂಪೈರ್ ಪರಿಗಣಿಸಲಿಲ್ಲ.