ಕರ್ನಾಟಕ

karnataka

ಏಷ್ಯಾ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್: 52 ವರ್ಷದಲ್ಲಿ ಮೊದಲ ಸಲ ಭಾರತದ ಡಬಲ್ಸ್ ಜೋಡಿಗೆ ಪದಕ

By

Published : Apr 29, 2023, 9:00 AM IST

ಏಷ್ಯಾ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ನಲ್ಲಿ ಭಾರತದ ಡಬಲ್ಸ್​ ಜೋಡಿಯಾದ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸೆಮಿಫೈನಲ್​ ತಲುಪಿದ್ದು, 52 ವರ್ಷಗಳಲ್ಲಿ ಮೊದಲ ಪದಕ ಪ್ರಾಪ್ತವಾಗಲಿದೆ.

ಏಷ್ಯಾ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್
ಏಷ್ಯಾ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್

ದುಬೈ:ಏಷ್ಯಾ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ನಲ್ಲಿ ಭಾರತಕ್ಕೆ ಪದಕ ಖಚಿತವಾಗಿದೆ. ಭಾರತದ ಅಗ್ರ ಪುರುಷರ ಡಬಲ್ಸ್ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಶನಿವಾರ ಇಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್​ ತಲುಪಿದರು. ಈ ಮೂಲಕ 52 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ ಪದಕ ಸಿಗಲಿದೆ.

ಇಂಡೋನೇಷ್ಯಾದ ಜೋಡಿಯಾದ ಮೊಹಮ್ಮದ್ ಅಹ್ಸಾನ್ ಮತ್ತು ಹೆಂಡ್ರಾ ಸೆಟಿಯಾವಾನ್ ವಿರುದ್ಧ ಕ್ವಾರ್ಟರ್​ಫೈನಲ್​ ಪಂದ್ಯದಲ್ಲಿ ಭಾರತದ ಜೋಡಿ 21-11 21-12 ಅಂತರದಿಂದ ಗೆದ್ದಿತು. ಸೆಮಿಫೈನಲ್​ನಲ್ಲಿ ರಾಂಕಿರೆಡ್ಡಿ ಮತ್ತು ಚಿರಾಗ್​ ಶೆಟ್ಟಿ ಚೈನೀಸ್ ತೈಪೆಯ ಲೀ ಯಾಂಗ್ ಮತ್ತು ವಾಂಗ್ ಚಿ-ಲಿನ್ ಅವರನ್ನು ಎದುರಿಸಲಿದ್ದಾರೆ.

ಸಿಂಗಲ್ಸ್​ ಹೋರಾಟ ಮುಕ್ತಾಯ:ಇದೇ ವೇಳೆ ಸಿಂಗಲ್ಸ್​ ವಿಭಾಗದಲ್ಲಿ ಪಿವಿ ಸಿಂಧು, ಹೆಚ್​ಎಸ್​ ಪ್ರಣಯ್​ ಸೋಲು ಕಾಣುವ ಮೂಲಕ ಹೋರಾಟ ಅಂತ್ಯಗೊಳಿಸಿದರು. ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವ ಎರಡನೇ ಶ್ರೇಯಾಂಕದ ಕೊರಿಯಾದ ಆನ್ ಸೆ ಯಂಗ್ ವಿರುದ್ಧ ಸೋಲನುಭವಿಸಿದರು. ವಿಶ್ವದ 8ನೇ ಶ್ರೇಯಾಂಕದ ಸಿಂಧು ಮೊದಲ ಗೇಮ್ ಅನ್ನು 21-18 ರಿಂದ ಗೆದ್ದರು. ನಂತರದ ಎರಡು ಗೇಮ್‌ಗಳಲ್ಲಿ ಅವರು 5-21 9-21 ರಲ್ಲಿ ಸೋತರು.

ಪುರುಷರ ವಿಭಾಗದಲ್ಲಿ ವಿಶ್ವ 8 ನೇ ಶ್ರೇಯಾಂಕದ ಹೆಚ್‌ಎಸ್ ಪ್ರಣಯ್ ಕೂಡ ಸೋತು ಟೂರ್ನಿಯಿಂದ ಹೊರಬಿದ್ದರು. ಜಪಾನ್‌ನ ಕಾಂಟಾ ತ್ಸುನೇಯಾಮಾ ವಿರುದ್ಧ ಪಂದ್ಯದಲ್ಲಿ ಗಾಯಗೊಂಡು ಪಂದ್ಯ ಬಿಟ್ಟುಕೊಟ್ಟರು. ಈ ವೇಳೆ 11-21 9-13 ತ ಹಿನ್ನಡೆಯಲ್ಲಿದ್ದರು.

ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ರೋಹನ್ ಕಪೂರ್ ಮತ್ತು ಎನ್ ಸಿಕ್ಕಿ ರೆಡ್ಡಿ ಅವರು ಇಂಡೋನೇಷ್ಯಾದ ಡೆಜಾನ್ ಫರ್ಡಿನಾನ್ಸ್ಯಾ ಮತ್ತು ಗ್ಲೋರಿಯಾ ಇಮ್ಯಾನುಯೆಲ್ಲೆ ವಿಡ್ಜಾಜಾ ವಿರುದ್ಧ ಕಠಿಣ ಹೋರಾಟದ ನಡುವೆಯೂ ಸೋಲು ಕಂಡರು. ಭಾರತದ ಜೋಡಿ 1 ಗಂಟೆ 5 ನಿಮಿಷಗಳ ಕಾಲ ಹೋರಾಡಿ ಕ್ವಾರ್ಟರ್‌ಫೈನಲ್‌ನಲ್ಲಿ 18-21 21-19 15-21 ಅಂತರದಿಂದ ಸೋತಿತು.

ಓದಿ:ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌: ಕ್ವಾರ್ಟರ್ ಫೈನಲ್​ನಲ್ಲಿ ಸಿಂಧುಗೆ ಸೋಲು

ABOUT THE AUTHOR

...view details