ಟೋಕಿಯೊ:ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ಜೋಡಿಯಾದ ಸಾತ್ವಿಕ್-ಚಿರಾಗ್ ಜೋಡಿ ಸೆಮಿಫೈನಲ್ ಪ್ರವೇಶಿಸಿ ಕಂಚಿನ ಪದಕವನ್ನು ಖಚಿತಪಡಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದೆ. ಷಟ್ಲರ್‌ಗಳಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಅವರು ಜಪಾನ್‌ನ ಯುಗೊ ಕೊಬಯಾಶಿ ಮತ್ತು ಟಕುರೊ ಹಾಕಿ ಅವರನ್ನು 24-22, 15-21, 21-14 ರಿಂದ ಸೋಲಿಸಿ ಇತಿಹಾಸ ನಿರ್ಮಿಸಿದ್ದಾರೆ.
ಇವರಿಬ್ಬರು ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಪುರುಷರ ಡಬಲ್ಸ್ ವಿಭಾಗದ ಆಟಗಾರರಾಗಿದ್ದಾರೆ. ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಅವರ ಮಹಿಳಾ ತಂಡದ ನಂತರ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಪದಕ ಗೆದ್ದ 2ನೇ ಜೋಡಿ ಎಂಬ ಹೆಗ್ಗಳಿಕೆಗೆ ಈ ಜೋಡಿ ಪಾತ್ರವಾಗಿದೆ. ಇತ್ತೀಚೆಗಷ್ಟೇ ನಡೆದ ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ ಬೆನ್ನಲ್ಲೇ ಟೂರ್ನಿ ಪ್ರವೇಶಿಸಿದ್ದ ಭಾರತದ ಜೋಡಿ, ಟೂರ್ನಿಯಲ್ಲಿ ನಂ.2 ಸ್ಥಾನದಲ್ಲಿರುವ ಜಪಾನ್ ಜೋಡಿಯನ್ನು ಮಣಿಸಿತ್ತು.
ಈ ಮೊದಲು 2011ರಲ್ಲಿ ಭಾರತದ ಮಹಿಳಾ ಡಬಲ್ಸ್ ಜೋಡಿಯಾದ ಅಶ್ವಿನಿ ಪೊನ್ನಪ್ಪ ಹಾಗೂ ಜ್ವಾಲಾ ಗುಟ್ಟಾ ಜೋಡಿಯು ಕಂಚಿನ ಪದಕ ಜಯಿಸಿತ್ತು. ಇದೀಗ ಭಾರತದ ಪುರುಷರ ಡಬಲ್ಸ್ ಜೋಡಿಯು ಸೆಮೀಸ್ ಪ್ರವೇಶಿಸುವುದರೊಂದಿಗೆ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟಾರೆ 13ನೇ ಪದಕ ಭಾರತದ ಪಾಲಾಗಿದೆ