ಹೈದರಾಬಾದ್: ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನೊಂದಿಗೆ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿಯಾಗಿದ್ದಾರೆ. ಈಗ ಅವರು ತಮ್ಮ ತವರು ರಾಜ್ಯ ತೆಲಂಗಾಣದ ಹೈದರಾಬಾದ್‌ನಲ್ಲಿ ವಿದಾಯ ಪ್ರದರ್ಶನ ಪಂದ್ಯ ಆಡಲಿದ್ದಾರೆ. ಇಂದು ಇಲ್ಲಿನ ಲಾಲ್ ಬಹದ್ದೂರ್ ಕ್ರೀಡಾಂಗಣದಲ್ಲಿ ಸಾನಿಯಾ ಕೊನೆಯ ವಿದಾಯದ ಮ್ಯಾಚ್ ಆಡಲಿದ್ದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
"18-20 ವರ್ಷಗಳ ಹಿಂದೆ ನಾನು ಆಡಲು ಪ್ರಾರಂಭಿಸಿದ ಅದೇ ಸ್ಥಳದಲ್ಲಿ ನನ್ನ ಕೊನೆಯ ಟೆನಿಸ್ ಪಂದ್ಯ ಆಡಲಿದ್ದೇನೆ. ನನ್ನೆಲ್ಲಾ ಸ್ನೇಹಿತರು, ಕುಟುಂಬ ಮತ್ತು ಅಭಿಮಾನಿಗಳ ಮುಂದೆ ಕೊನೆಯ ಬಾರಿಗೆ ಆಡುತ್ತೇನೆ" ಎಂದು ಅವರು ಭಾವುಕರಾಗಿದ್ದಾರೆ.
ಸಾನಿಯಾ ಮಿರ್ಜಾ ಎರಡು ಪ್ರದರ್ಶನ ಪಂದ್ಯಗಳನ್ನು ಆಡಲಿದ್ದಾರೆ. ಈ ಪೈಕಿ ಮೊದಲ ಪಂದ್ಯದಲ್ಲಿ ನಟರು, ಕ್ರಿಕೆಟಿಗರು ಮತ್ತು ಟೆನಿಸ್ ಆಟಗಾರರು ಭಾಗವಹಿಸುವರು. ಎರಡು ತಂಡಗಳಲ್ಲಿ ಒಂದನ್ನು ಸಾನಿಯಾ ಮುನ್ನಡೆಸಿದರೆ, ಇನ್ನೊಂದನ್ನು ಭಾರತದ ಮತ್ತೋರ್ವ ಪ್ರಖ್ಯಾತ ಟೆನಿಸ್ ತಾರೆ ರೋಹನ್ ಬೋಪಣ್ಣ ಮುನ್ನಡೆಸಲಿದ್ದಾರೆ. ಸಾನಿಯಾ ಮಿರ್ಜಾ-ರೋಹನ್ ಬೋಪಣ್ಣ ಮತ್ತು ಇವಾನ್ ಡೊಡಿಗ್-ಬೆಥನಿ ಮ್ಯಾಟೆಕ್-ಸ್ಯಾಂಡ್ಸ್ ನಡುವೆ ಮಿಶ್ರ ಡಬಲ್ಸ್ ಪಂದ್ಯ ನಡೆಯಲಿದೆ. ರೋಹನ್ ಬೋಪಣ್ಣ, ಸ್ಯಾಂಡ್ಸ್ ಮತ್ತು ದೊಡಿಗ್ ಈ ಹಿಂದೆ ಸಾನಿಯಾ ಮಿರ್ಜಾ ಅವರೊಂದಿಗೆ ಪಂದ್ಯಗಳನ್ನು ಆಡಿದ್ದಾರೆ.
ಸಾನಿಯಾ ಮತ್ತು ಬೋಪಣ್ಣ ದೀರ್ಘಕಾಲ ಒಟ್ಟಿಗೆ ಟೆನಿಸ್ ಆಡಿದವರು. 2016ರ ರಿಯೊ ಒಲಿಂಪಿಕ್ಸ್‌ನ ಮಿಶ್ರ ಡಬಲ್ಸ್‌ನಲ್ಲಿ ಇವರಿಬ್ಬರ ಜೋಡಿ ನಾಲ್ಕನೇ ಸ್ಥಾನದಲ್ಲಿತ್ತು. ಈ ಜೋಡಿಯು ವರ್ಷದ ಆರಂಭದಲ್ಲಿ ಆಸ್ಟ್ರೇಲಿಯನ್ ಓಪನ್‌ನ ಫೈನಲ್‌ಗೆ ತಲುಪಿತ್ತು. ಇದರಲ್ಲಿ ಅವರು ಸೋಲು ಅನುಭವಿಸಿದ್ದರು. ಸಾನಿಯಾ ತಮ್ಮ ವೃತ್ತಿಜೀವನದಲ್ಲಿ 44 ವುಮೆನ್ಸ್ ಟೆನಿಸ್ ಅಸೋಸಿಯೇಶನ್ (WTA) ಚಾಂಪಿಯನ್‌ಶಿಪ್‌ಗಳನ್ನು (ಡಬಲ್ಸ್‌ನಲ್ಲಿ 43 ಮತ್ತು ಸಿಂಗಲ್ಸ್‌ನಲ್ಲಿ ಒಂದು) ಗೆದ್ದಿದ್ದಾರೆ. ಮಹಿಳೆಯರ ಡಬಲ್ಸ್ ವುಮೆನ್ಸ್ ಟೆನಿಸ್ ಅಸೋಸಿಯೇಶನ್ ಶ್ರೇಯಾಂಕದಲ್ಲಿ ವಿಶ್ವದ ನಂಬರ್ 1 ಆಟಗಾರ್ತಿಯೂ ಹೌದು.