ಹೈದರಾಬಾದ್:"ಆನಂದಭಾಷ್ಪ"ದೊಂದಿಗೆ ಭಾರತೀಯ ಟೆನಿಸ್ ದಂತಕಥೆ ಸಾನಿಯಾ ಮಿರ್ಜಾ ಇಂದು ತಮ್ಮ ವೃತ್ತಿ ಜೀವನ ಪ್ರಾರಂಭವಾದ ಸ್ಥಳದಲ್ಲೇ ವಿದಾಯದ ಆಟವನ್ನು ಆಡಿ ಟೆನಿಸ್ ಪ್ರಯಾಣವನ್ನು ಕೊನೆಗೊಳಿಸಿದರು.
ರೋಹನ್ ಬೋಪಣ್ಣ, ಯುವರಾಜ್ ಸಿಂಗ್ ಮತ್ತು ಬೆಥನಿ ಮ್ಯಾಟೆಕ್-ಸ್ಯಾಂಡ್ಸ್, ಇವಾನ್ ಡೋಡಿಗ್, ಕಾರಾ ಬ್ಲಾಕ್, ಮರಿಯನ್ ಬಾರ್ತೋಲಿ ಒಳಗೊಂಡ ಪ್ರದರ್ಶನ ಪಂದ್ಯಗಳಲ್ಲಿ ಆಡುವ ಮೂಲಕ, ಸಾನಿಯಾ ಅವರು ಅಂತಿಮವಾಗಿ ಲಾಲ್ ಬಹದ್ದೂರ್ ಟೆನಿಸ್ ಸ್ಟೇಡಿಯಂನಲ್ಲಿ ತಮ್ಮ ಸುಪ್ರಸಿದ್ಧ ವೃತ್ತಿಜೀವನಕ್ಕೆ ವಿದಾಯ ಹೇಳಿದರು. ಸುಮಾರು ಎರಡು ದಶಕಗಳ ಹಿಂದೆ ಐತಿಹಾಸಿಕ ವುಮೆನ್ಸ್ ಟೆನಿಸ್ ಅಸೋಸಿಯೇಶನ್ (WTA) ಸಿಂಗಲ್ಸ್ ಪ್ರಶಸ್ತಿಯ ಗೆದ್ದು, ಟೆನಿಸ್ ವೇದಿಕೆಯ ಮೇಲೆ ತನ್ನ ದಾಪುಗಾಲಿಟ್ಟರು.
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್, ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪ, ಅನನ್ಯಾ ಬಿರ್ಲಾ, ಹುಮಾ ಖುರೇಷಿ, ದುಲ್ಕರ್ ಸಲ್ಮಾನ್, ಅವರ ಅಭಿಮಾನಿಗಳು, ಕುಟುಂಬ, ಸ್ನೇಹಿತರು, ಕ್ರೀಡಾ ವ್ಯಕ್ತಿಗಳು ಮತ್ತು ಸಾನಿಯಾ ಮಿರ್ಜಾ ಟೆನಿಸ್ ಅಕಾಡೆಮಿಯ ವಿದ್ಯಾರ್ಥಿಗಳು ಸೇರಿದಂತೆ ಗಣ್ಯರು ಆಟ ವೀಕ್ಷಿಸಿದರು.
36ರ ಹರೆಯದ ಸಾನಿಯಾ ಅವರನ್ನು ಪ್ರಮುಖ ವ್ಯಕ್ತಿಗಳು ಸೇರಿದಂತೆ ಅಭಿಮಾನಿಗಳು ಹರ್ಷೋದ್ಗಾರ ಮಾಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ, ಆರು ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತೆ (ಮೂರು ಮಹಿಳಾ ಡಬಲ್ಸ್ ಮತ್ತು ಮಿಶ್ರ ಡಬಲ್ಸ್) ತಮ್ಮ ವಿದಾಯ ಭಾಷಣ ಮಾಡುವಾಗ ಭಾವುಕರಾದರು. ದೇಶಕ್ಕಾಗಿ 20 ವರ್ಷ ಆಡಿರುವುದು ನನಗೆ ದೊಡ್ಡ ಗೌರವ ತಂದಿದೆ ಎಂದರು.
"ನಿಮ್ಮೆಲ್ಲರ ಮುಂದೆ ನನ್ನ ಕೊನೆಯ ಪಂದ್ಯವನ್ನು ಆಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಹೈದರಾಬಾದ್‌ನ ನನ್ನ ತವರು ಪ್ರೇಕ್ಷಕರ ಮುಂದೆ ನನ್ನ ಕೊನೆಯ ಪಂದ್ಯವನ್ನು ಆಡುವ ಮೂಲಕ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಯಾವಾಗಲೂ ಬಯಸುತ್ತೇನೆ ಮತ್ತು ನಾನು ಸರ್ಕಾರಕ್ಕೆ ತುಂಬಾ ಕೃತಜ್ಞಳಾಗಿದ್ದೇನೆ" ಎಂದು ನುಡಿದರು.
"ಇಲ್ಲಿಂದ ನನ್ನ ಟೆನಿಸ್ ವೃತ್ತಿ ಜೀವನ 20+ ವರ್ಷಗಳವರೆಗೆ ಸಾಗಿದೆ. ನಾನು ಈ ವಿಭಾಗವನ್ನು ಪ್ರವೇಶಿಸುವ ವೇಳೆ ಟೆನಿಸ್ ಇಷ್ಟು ದೊಡ್ಡ ಮಟ್ಟದಲ್ಲಿ ತಲುಪಿರಲಿಲ್ಲ. ಅಂದು ನನ್ನ ತಂದೆ ಮತ್ತು ತಾಯಿ ನನಗೆ ಬೆಂಬಲ ನೀಡದಿದ್ದಲ್ಲಿ ಈ ಸಾಧನೆ ಸಾಧ್ಯವಿಲ್ಲ. ನನ್ನ ಕುಟುಂಬವೇ ನನ್ನ ಮೊದಲ ಭಲವಾಗಿದೆ. ಆರಂಭದ ದಿನದಲ್ಲಿ ನನ್ನ ಆಟಕ್ಕೆ ಹುಚ್ಚು ಎಂದು ಕರೆಯುತ್ತಿದ್ದರು. ಇಂದು ಇಷ್ಟು ಅಭಿಮಾನಿಗಳನ್ನು ಗಳಿಸಿರುವುದಕ್ಕೆ ಸಂತೋಷವಾಗಿದೆ".
"ನಾನು ಇಂದು ಭಾವುಕಳಾಗುತ್ತೇನೆ ಎಂದು ಭಾವಿಸಿರಲಿಲ್ಲ. ಆದರೆ, ಇದು ನಿಜವಾಗಿಯೂ ಸಂತೋಷದ ಕಣ್ಣೀರು. ನನಗೆ ತವರಿನ ಉತ್ತಮ ವಿದಾಯ ಇದು. ತಾನು ನಿವೃತ್ತಿಯಾಗಿದ್ದರೂ, ಭಾರತ ಮತ್ತು ತೆಲಂಗಾಣದಲ್ಲಿ ಟೆನಿಸ್ ಮತ್ತು ಕ್ರೀಡೆಗಳ ಭಾಗವಾಗಲಿದ್ದೇನೆ. ದೇಶದಿಂದ ಅನೇಕ ಸಾನಿಯಾಗಳು ಹೊರಹೊಮ್ಮಲಿದ್ದಾರೆ" ಎಂದು ಟೆನಿಸ್ ದಂತಕಥೆ ಮಿರ್ಜಾ ಹೇಳಿದ್ದಾರೆ.
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಮಾತನಾಡಿ, ನಾನು ಕ್ರೀಡಾ ಸಚಿವನಾಗಿದ್ದಾಗ ಸಾನಿಯಾ ಅವರೊಂದಿಗೆ ಸಂಪರ್ಕದಲ್ಲಿದ್ದೆ. ಅವರ ಮುಂದಿನ ಪ್ರಯತ್ನಗಳಿಗೆ ನಾನು ಅವರಿಗೆ ಶುಭ ಹಾರೈಸುತ್ತೇನೆ. ನಾನು ಸಾನಿಯಾ ಮಿರ್ಜಾ ಅವರ ವಿದಾಯ ಪಂದ್ಯಕ್ಕಾಗಿ ಹೈದರಾಬಾದ್‌ಗೆ ಬಂದಿದ್ದೇನೆ. ಈ ಪಂದ್ಯ ವೀಕ್ಷಣೆಗೆ ಬಂದ ಸಾನಿಯಾ ಅಭಿಮಾನಿಗಳನ್ನು ನೋಡಿ ನನಗೆ ಸಂತೋಷವಾಯಿತು. ಸಾನಿಯಾ ಮಿರ್ಜಾ ಅವರು ಭಾರತೀಯ ಟೆನಿಸ್‌ಗೆ ಮಾತ್ರವಲ್ಲದೆ ಭಾರತೀಯ ಕ್ರೀಡೆಗಳಿಗೂ ಸ್ಫೂರ್ತಿಯಾಗಿದ್ದಾರೆ" ಎಂದು ಹೇಳಿದರು.
ಪಂದ್ಯದ ನಂತರ ಸಾನಿಯಾ ಅವರನ್ನು ತೆಲಂಗಾಣ ಸಚಿವರಾದ ಕೆ ಟಿ ರಾಮರಾವ್ ಮತ್ತು ವಿ ಶ್ರೀನಿವಾಸ್ ಗೌಡ್ ಅವರು ಇತರ ಆಟಗಾರರೊಂದಿಗೆ ಸನ್ಮಾನಿಸಿದರು.
'ಸೆಲೆಬ್ರೇಟಿಂಗ್ ದಿ ಲೆಗಸಿ ಆಫ್ ಸಾನಿಯಾ ಮಿರ್ಜಾ', 'ನೆನಪಿಗೆ ಧನ್ಯವಾದಗಳು' ಮತ್ತು 'ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಸಾನಿಯಾ' ಎಂಬ ಬ್ಯಾನರ್ಗಳು ಅಭಿಮಾನಿಗಳ ಕೈಯಲ್ಲಿ ರಾರಾಜಿಸುತ್ತಿದ್ದವು.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಮಾತನಾಡಿ,"ಇಂದು ನಾವು ಸಾನಿಯಾಗೆ ಉತ್ತಮ ವಿದಾಯ ನೀಡುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ. ಅವರು ಟೆನಿಸ್‌ಗಾಗಿ, ಭಾರತ ಮತ್ತು ಪ್ರಪಂಚದಾದ್ಯಂತದ ಮಹಿಳೆಯರಿಗೆ ಏನು ಮಾಡಿದ್ದಾರೆ, ಇದು ಒಂದು ಉದಾಹರಣೆ ಎಂದು ನಾನು ಭಾವಿಸುತ್ತೇನೆ. ನಾನು ಅವರಿಗೆ ಶುಭ ಹಾರೈಸುತ್ತೇನೆ. ಜನರು ಆಕೆ ಹೆಚ್ಚು ಆಟವಾಡಲು ಬಯಸುತ್ತಾರೆ ಎಂದು ನನಗೆ ತಿಳಿದಿದೆ. ಆದರೆ ಪ್ರತಿ ವೃತ್ತಿಜೀವನವು ಕೊನೆಗೊಳ್ಳಬೇಕು. ಅವರು ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದರು.
ಅಂಡರ್-18 ಮಹಿಳಾ ಟೆನಿಸ್ ಆಟಗಾರ್ತಿ ಸಾಮಾ ಚೆವಿಕಾ ರೆಡ್ಡಿ, "ಇಂದು, ಸಾನಿಯಾಗೆ ಇದು ವಿಶೇಷ ದಿನವಾಗಿದೆ. ಅವರು ಇಲ್ಲಿ ಪಂದ್ಯವನ್ನು ಆಡುವಾಗ ನಾನು ಕೂಡ ಅಂಗಳದಲ್ಲಿದ್ದದ್ದು ವಿಶೇಷ ಕ್ಷಣವಾಗಿತ್ತು. ಅವರೊಂದಿಗೆ ಆಟವಾಡಿ ನನಗೆ ತುಂಬಾ ಸಂತೋಷವಾಗಿದೆ. ಅವರು ನನಗೆ ತುಂಬಾ ಸ್ಫೂರ್ತಿ ನೀಡಿದ್ದಾರೆ ಮತ್ತು ನಾನು ಅವರಂತೆ ಆಗಲು ಇಷ್ಟಪಡುತ್ತೇನೆ" ಎಂದಿದ್ದಾರೆ.
ಇದನ್ನೂ ಓದಿ:ಹೈದರಾಬಾದ್ನಲ್ಲಿಂದು ಸಾನಿಯಾ ವಿದಾಯದ ಆಟ: ತವರಿನ ಅಭಿಮಾನಿಗಳ ಮುಂದೆ ಪ್ರದರ್ಶನ