ನವದೆಹಲಿ :ಸಾಗರ್ ಧನ್ಕರ್ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಅನಿರುದ್ಧ ದಹಿಯಾ ಅವರಿಗೆ ಜಾಮೀನು ನೀಡಲು ದೆಹಲಿಯ ರೋಹಿಣಿ ಕೋರ್ಟ್ ನಿರಾಕರಿಸಿದೆ.
13 ದಿನಗಳ ಮಧ್ಯಂತರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶಿವಾಜಿ ಆನಂದ್ ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ದಹಿಯಾ ಅವರನ್ನ ಜೂನ್ 10 ರಂದು ಬಂಧಿಸಲಾಗಿತ್ತು. ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಮತ್ತು ಇತರ 11 ಮಂದಿ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ಕಳೆದ ಮೇ 4ರ ಮಧ್ಯರಾತ್ರಿ 23 ವರ್ಷದ ಕುಸ್ತಿಪಟು ಸಾಗರ್ ಧನ್ಕರ್ ಹಾಗೂ ಆತನ ಸ್ನೇಹಿತರಾದ ಸೋನು ಹಾಗೂ ಅಮಿತ್ ಕುಮಾರ್ ಮೇಲೆ ಕುಸ್ತಿಪಟು ಸುಶೀಲ್ ಕುಮಾರ್ ಹಾಗೂ ಸಹಚರರು ಹಲ್ಲೆ ನಡೆಸಿದ್ದರಿಂದ ಸಾಗರ್ ಧನ್ಕರ್ ಮೃತಪಟ್ಟಿದ್ದಾರೆಂಬ ಆರೋಪವಿದೆ. ಎಲೆಕ್ಟ್ರಾನಿಕ್ ಸಾಕ್ಷ್ಯದಲ್ಲಿ ಸುಶೀಲ್ ಕುಮಾರ್ ಹಾಗೂ ಆತನ ಸಹಚರರು ಹಲ್ಲೆ ನಡೆಸಿದ್ದು ಸ್ಪಷ್ಟವಾಗಿತ್ತು.
ಈ ಪ್ರಕರಣದಲ್ಲಿ ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ 170 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು, ಆಗಸ್ಟ್ 2ರಂದು ಸುಶೀಲ್ ಕುಮಾರ್ ನನ್ನು ಪ್ರಮುಖ ಆರೋಪಿಯನ್ನಾಗಿ ಹೆಸರಿಸಲಾಗಿತ್ತು. ಆಗಸ್ಟ್ 6ರಂದು ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಸಲ್ಲಿಸಿದ ಚಾರ್ಜ್ ಶೀಟ್ ಅನ್ನು ನ್ಯಾಯಾಲಯ ಪರಿಗಣಿಸಿತ್ತು.