ನವದೆಹಲಿ: ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಆಫ್ ಸ್ಪಿನ್ ಬೌಲಿಂಗ್ನಲ್ಲಿ ಸ್ವಲ್ಪ ದೌರ್ಬಲ್ಯ ಹೊಂದಿದ್ದರು ಎಂದು ಶ್ರೀಲಂಕಾ ಕ್ರಿಕೆಟ್ ದಂತಕಥೆ ಮುತ್ತಯ್ಯ ಮುರಳೀಧರನ್ ಬಹಿರಂಗಪಡಿಸಿದ್ದಾರೆ.
ಐಸಿಸಿ ಕ್ರಿಕೆಟ್ ಹಾಲ್ ಆಫ್ ಫೇಮ್‌ನ ಸದಸ್ಯ ಮುರಳೀಧರನ್ ಕ್ರೀಡಾ ಇತಿಹಾಸದಲ್ಲಿ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. 800 ಟೆಸ್ಟ್ ವಿಕೆಟ್ ಮತ್ತು 530 + ಏಕದಿನ ವಿಕೆಟ್ ಪಡೆದ ಏಕೈಕ ಬೌಲರ್ ಆಗಿ ಹೆಸರು ಗಳಿಸಿದ್ದಾರೆ. ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಹಿರಿಮೆಯೂ ಅವರ ಹೆಸರಿನಲ್ಲಿದೆ. ಗಮನಾರ್ಹ ವಿಷಯ ಎಂದರೆ ಮುರಳೀಧರನ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 13 ಬಾರಿ ತೆಂಡೂಲ್ಕರ್ ಅವರನ್ನು ಔಟ್ ಮಾಡಿದ್ದಾರೆ.
ಸಚಿನ್ಗೆ ತಮ್ಮ ಬೌಲಿಂಗ್ ತಂತ್ರ ಗೊತ್ತಿತ್ತು
ಸಚಿನ್ಗೆ ಬೌಲಿಂಗ್ ಮಾಡಲು ಯಾವುದೇ ಭಯವಿರಲಿಲ್ಲ ಏಕೆಂದರೆ ಆತನಿಂದ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಆತ ತನ್ನ ವಿಕೆಟ್ ರಕ್ಷಣೆ ಮಾಡಿಕೊಳ್ಳುವ ಶಕ್ತಿ ಅವರಲ್ಲಿತ್ತು. ಅಷ್ಟೇ ಅಲ್ಲ ಆತ ತಮ್ಮ ಬೌಲಿಂಗ್ ಬಗ್ಗೆ ಚನ್ನಾಗಿ ಅರಿತುಕೊಂಡಿದ್ದರು. ತಮ್ಮ ಬಾಲ್ ಎದುರಿಸುವ ತಂತ್ರವೂ ತಿಳಿದಿತ್ತು ಎಂದು ಮುತ್ತಯ್ಯ ಮುರಳೀಧರನ್ ESPNCricinfo ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಆಫ್ ಸ್ಪಿನ್ ಬಗ್ಗೆ ಸಣ್ಣ ದೌರ್ಬಲ್ಯ ಹೊಂದಿದ್ದರು
ನನ್ನ ವೃತ್ತಿಜೀವನದಲ್ಲಿ ನಾನು ಗಮನಿಸಿದಂತೆ, ಸಚಿನ್ ಆಫ್ ಸ್ಪಿನ್ ವಿರುದ್ಧ ಸಣ್ಣ ದೌರ್ಬಲ್ಯ ಹೊಂದಿದ್ದರು. ಲೆಗ್ ಸ್ಪಿನ್‌ನೊಂದಿಗೆ ಅವರು ಸ್ಮಾಶ್ ಮಾಡುತ್ತಾರೆ ಆದರೆ, ಆಫ್ ಸ್ಪಿನ್ ಅವರಿಗೆ ಕಷ್ಟವಾಗುತ್ತಿತ್ತು. ಏಕೆಂದರೆ ನಾನು ಅವರನ್ನು ಹಲವು ಬಾರಿ ಔಟ್ ಮಾಡಿದ್ದೇನೆ ಎಂಬ ಸ್ವಾರಸ್ಯಕರ ಮಾಹಿತಿಯನ್ನೂ ಇದೇ ವೇಳೆ ಮುತ್ತಯ್ಯ ಮುರುಳೀಧರನ್ ಹಂಚಿಕೊಂಡಿದ್ದಾರೆ.
ಏನೋ ಗೊತ್ತಿಲ್ಲ, ಈ ಬಗ್ಗೆ ನಾನು ಅವರೊಂದಿಗೆ ಮಾತನಾಡಿಲ್ಲ. ನನ್ನ ಮನಸ್ಸಿನಲ್ಲಿ ಅವರು ಸ್ವಲ್ಪ ದೌರ್ಬಲ್ಯವನ್ನು ಹೊಂದಿದ್ದಾರೆ ಎಂದು ನಾನು ಭಾವಿಸಿದ್ದೇನೆ, ಅದಕ್ಕಾಗಿಯೇ ಇತರ ಆಟಗಾರರಿಗೆ ಹೋಲಿಸಿದರೆ ನನಗೆ ಸ್ವಲ್ಪ ಅನುಕೂಲವಾಯಿತು. ಸಚಿನ್ ಒಬ್ಬ ಕಠಿಣ ಆಟಗಾರ, ಆತನನ್ನು ಹೊರಹಾಕುವುದು ತುಂಬಾ ಕಷ್ಟ ಎಂದರು.