ನವದೆಹಲಿ :ಸಾಗರ್ ರಾಣಾ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಭಾರತದ ಸ್ಟಾರ್ ಕುಸ್ತಿಪಟು ಸುಶೀಲ್ಕುಮಾರ್ ಹೆಚ್ಚಿನ ಪ್ರೊಟೀನ್ಯುಕ್ತ ಆಹಾರಕ್ಕಾಗಿ ಸಲ್ಲಿಸಿದ್ದ ಮನವಿಯನ್ನು ಆಲಿಸಿರುವ ದೆಹಲಿಯ ರೋಹಿಣಿ ಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಭಾರತಕ್ಕೆ 2 ಒಲಿಂಪಿಕ್ಸ್ ಪದಕ ತಂದುಕೊಟ್ಟಿರುವ ಸುಶೀಲ್ ಕುಮಾರ್, ಕುಸ್ತಿಪಟು ಸಾಗರ್ ರಾಣಾ ಧಂಕರ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಅವರನ್ನು ಜೂನ್ 2ರಂದು ಜೈಲು ಸೇರಿದ್ದರು. ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆಯ ನಂತರ ಮಂಡೋಲಿ ಜೈಲಿನ 15ನೇ ನಂಬರ್ ಕೋಣೆಯಲ್ಲಿ ಇರಿಸಲಾಗಿದೆ.
ವರದಿಯಂತೆ ಜೈಲಿನಲ್ಲಿ ಸುಶೀಲ್ ಕುಮಾರ್ ಅವರ ಆಹಾರ ಪದ್ಧತಿ ಕುಂಠಿತವಾಗಿದೆ. ಅವರಿಗೆ ರೋಟಿ, ತರಕಾರಿ ಹಾಗೂ ಹಾಲಿನ ಜೊತೆ ಹಣ್ಣುಗಳನ್ನು ನೀಡಲಾಗುತ್ತಿದೆ. ಆದರೆ, ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುವಾಗಿರುವ ಅವರು, ತಮ್ಮ ದೇಹದ ತೂಕ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳಲು ಹೆಚ್ಚಿನ ಪ್ರೊಟೀನ್ ಯುಕ್ತ ಆಹಾರ ಬೇಕೆಂದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.