ನವದೆಹಲಿ: ಬಿಎನ್‌ಪಿ ಪರಿಬಾಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಸ್ಟ್ರೇಲಿಯನ್ ಜೊತೆಗಾರ ಮ್ಯಾಟ್ ಎಬ್ಡೆನ್ ಅವರೊಂದಿಗೆ ಪುರುಷರ ಡಬಲ್ಸ್ ಪ್ರಶಸ್ತಿ ಗೆಲ್ಲುವ ಮೂಲಕ ಭಾರತದ 43 ವರ್ಷ ವಯಸ್ಸಿನ ರೋಹನ್ ಬೋಪಣ್ಣ ಎಟಿಪಿ ಮಾಸ್ಟರ್ಸ್ 1000 ಈವೆಂಟ್ ಗೆದ್ದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ರೋಹನ್ ಬೋಪಣ್ಣ ಮತ್ತು 35 ವರ್ಷದ ಎಬ್ಡೆನ್ ಶನಿವಾರ ನಡೆದ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಡಚ್ ಜೋಡಿ ವೆಸ್ಲಿ ಕೂಲ್‌ಹಾಫ್ ಮತ್ತು ಬ್ರಿಟನ್‌ನ ನೀಲ್ ಸ್ಕುಪ್ಸ್ಕಿ ಅವರನ್ನು 6-3, 2-6, 10-8 ಸೆಟ್‌ಗಳಿಂದ ಸೋಲಿಸಿದರು.
10ನೇ ಎಟಿಪಿ ಮಾಸ್ಟರ್ಸ್ 1000 ಫೈನಲ್‌ನಲ್ಲಿ ಆಡಿದ ನಂತರ ಬೋಪಣ್ಣ ಮಾತನಾಡಿ, 'ನಾನು ವರ್ಷಗಳಿಂದ ಇಲ್ಲಿ ಭಾಗವಹಿಸುತ್ತಿದ್ದೇನೆ. ಇಲ್ಲಿ ಬೇರೆಯವರು ಪ್ರಶಸ್ತಿ ಗೆಲ್ಲುವುದನ್ನು ನಾನು ಕಂಡಿದ್ದೇನೆ. ಆದರೆ ಇಲ್ಲಿ ನಾನು ಮತ್ತು ಮ್ಯಾಟ್ ಎಬ್ಡೆನ್ ಪ್ರಶಸ್ತಿಯನ್ನು ಗೆದ್ದಿರುವುದು ನನಗೆ ತುಂಬಾ ಸಂತೋಷವಾಗಿದೆ. ನಾವು ಕಠಿಣ ಮತ್ತು ನಿಕಟ ಪಂದ್ಯಗಳನ್ನು ಆಡಿದ್ದೇವೆ. ಇಂದು ನಾವು ಇಲ್ಲಿ ಅತ್ಯುತ್ತಮ ತಂಡವನ್ನು ಎದುರಿಸಿ ಟ್ರೋಫಿಯನ್ನು ಗೆದ್ದುಕೊಂಡಿರುವುದರ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ" ಎಂದಿದ್ದಾರೆ.
43 ವರ್ಷದ ರೋಹನ್ ಬೋಪಣ್ಣ ಅವರು ಕೆನಡಾದ ಡೇನಿಯಲ್ ನೆಸ್ಟರ್ ಅವರ ದಾಖಲೆಯನ್ನು ಹಿಂದಿಕ್ಕಿದರು. ಡೇನಿಯಲ್ ನೆಸ್ಟರ್ 42ನೇ ವಯಸ್ಸಿನಲ್ಲಿ (2015 ರಲ್ಲಿ) ಸಿನ್ಸಿನಾಟಿ ಮಾಸ್ಟರ್ಸ್ ಗೆದ್ದಿದ್ದರು. ಇದರಿಂದ ಅವರು ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಖ್ಯಾತಿಯನ್ನು ಹೊಂದಿದ್ದರು. ಈ ಬಗ್ಗೆ ತಮಾಷೆಯಾಗಿ ಮಾತನಾಡಿದ ಬೋಪಣ್ಣ,'ನಾನು ಡೇನಿಯಲ್ ನೆಸ್ಟರ್ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ನಾನು ಅವರ ದಾಖಲೆಯನ್ನು ಮುರಿದಿದ್ದಕ್ಕಾಗಿ ಕ್ಷಮಿಸಿ ಎಂದು ಹೇಳಿದೆ. ಈ ಟೈಟಲ್ ಯಾವಾಗಲೂ ನನ್ನೊಂದಿಗೆ ಇರುತ್ತದೆ. ನಾನು ಈ ಟೈಟಲ್ಗಾಗಿ ನಿಜವಾಗಿಯೂ ಸಂತೋಷಪಡುತ್ತೇನೆ" ಎಂದು ಹೇಳಿದ್ದಾರೆ.