ನ್ಯೂಯಾರ್ಕ್: ರೋಹನ್ ಬೋಪಣ್ಣ ಅವರು 13 ವರ್ಷಗಳ ನಂತರ ಅಮೆರಿಕನ್ ಓಪನ್‌ನಲ್ಲಿ ಪುರುಷರ ಡಬಲ್ಸ್ ಫೈನಲ್‌ಗೆ ಸ್ಥಾನ ಪಡೆಯಲು ಒಂದು ಹೆಜ್ಜೆ ಹಿಂದಿದ್ದಾರೆ. ಪುರುಷರ ಡಬಲ್ಸ್ ವಿಭಾಗದಲ್ಲಿ 2010 ರಲ್ಲಿ ನ್ಯೂಯಾರ್ಕ್‌ನಲ್ಲಿ ಪಾಕಿಸ್ತಾನದ ಐಸಾಮ್ - ಉಲ್ - ಹಕ್ ಖುರೇಷಿ ಅವರೊಂದಿಗೆ ಏಕೈಕ ಗ್ರ್ಯಾಂಡ್ ಸ್ಲಾಮ್ ಫೈನಲ್‌ನಲ್ಲಿ ಕಾಣಿಸಿಕೊಂಡ ಬೋಪಣ್ಣ, ಮಂಗಳವಾರ ತಮ್ಮ ಆಸ್ಟ್ರೇಲಿಯಾದ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ನೇರ ಸೆಟ್‌ಗಳಲ್ಲಿ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಗೆದ್ದರು.
ಈ ವರ್ಷ ವಿಂಬಲ್ಡನ್‌ನಲ್ಲಿ ಸೆಮಿಫೈನಲ್ ತಲುಪಿದ ಆರನೇ ಶ್ರೇಯಾಂಕದ ಇಂಡೋ - ಆಸ್ಟ್ರೇಲಿಯನ್ ಜೋಡಿ, ಒಂದು ಗಂಟೆ 28 ನಿಮಿಷದ ಕಾಲ ನಡೆದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ 15 ನೇ ಶ್ರೇಯಾಂಕದ ಸ್ಥಳೀಯ ಜೋಡಿ ನಥಾನಿಯಲ್ ಲ್ಯಾಮನ್ಸ್ ಮತ್ತು ಜಾಕ್ಸನ್ ವಿಥ್ರೋ ಅವರನ್ನು 7-6(10), 6-1 ಸೆಟ್‌ಗಳಿಂದ ಸೋಲಿಸಿದರು. ಲ್ಯಾಮನ್ಸ್ ಮತ್ತು ವಿಥ್ರೋ ಹಿಂದಿನ ಸುತ್ತಿನಲ್ಲಿ ಹಾಲಿ ವಿಂಬಲ್ಡನ್ ಚಾಂಪಿಯನ್ ಮತ್ತು ಅಗ್ರ ಶ್ರೇಯಾಂಕದ ನೆದರ್ಲ್ಯಾಂಡ್ಸ್‌ನ ವೆಸ್ಲಿ ಕೂಹ್ಲೋಫ್ ಮತ್ತು ಗ್ರೇಟ್ ಬ್ರಿಟನ್‌ನ ನೀಲ್ ಸ್ಕುಪ್ಸ್ಕಿ ಅವರನ್ನು ಸೋಲಿಸಿದ್ದರು. 43 ವರ್ಷದ ಬೋಪಣ್ಣ ಮತ್ತು 35 ವಯಸ್ಸಿನ ಎಬ್ಡೆನ್ ಜೋಡಿ ನಾಳೆ ಸೆಮಿಫೈನಲ್ ಪಂದ್ಯದಲ್ಲಿ ಫ್ರೆಂಚ್ ಜೋಡಿಯಾದ ನಿಕೋಲಸ್ ಮಹುತ್ ಮತ್ತು ಪಿಯರೆ - ಹ್ಯೂಗ್ಸ್ ಹರ್ಬರ್ಟ್‌ರೊಂದಿಗೆ ಸೆಣಸಲಿದ್ದಾರೆ.