ಕರ್ನಾಟಕ

karnataka

ETV Bharat / sports

ರೋಜರ್​ ಫೆಡರರ್​ ಶ್ಲಾಘಿಸಿದ ಬ್ಯಾಟಿಂಗ್ ಕಿಂಗ್​​ ವಿರಾಟ್​ ಕೊಹ್ಲಿ.. ಧನ್ಯವಾದ ಹೇಳಿದ ಟೆನಿಸ್​ ದಂತಕಥೆ - ಫೆಡರರ್​ ಮತ್ತು ರಾಫೆಲ್​ ನಡಾಲ್​ ಕಣ್ಣೀರು

ಟೆನಿಸ್​ ಲೋಕದ ದೊರೆ ರೋಜರ್​ ಫೆಡರರ್​ ಸಾಧನೆ ಬಗ್ಗೆ ಭಾರತದ ಬ್ಯಾಟಿಂಗ್ ಕಿಂಗ್​ ವಿರಾಟ್ ಕೊಹ್ಲಿ ಶ್ಲಾಘಿಸಿದ ವಿಡಿಯೋ ಹಂಚಿಕೊಂಡಿದ್ದು, ಇದಕ್ಕೆ ಟೆನಿಸ್​ ದಂತಕಥೆ ರೋಜರ್​ ಧನ್ಯವಾದ ಹೇಳಿದ್ದಾರೆ.

thanks-virat-kohli
ಧನ್ಯವಾದ ಹೇಳಿದ ಟೆನಿಸ್​ ದಂತಕಥೆ

By

Published : Sep 29, 2022, 9:16 PM IST

ನವದೆಹಲಿ:ಟೆನಿಸ್​ ಅಂಗಳಕ್ಕೆ ಇತ್ತೀಚೆಗಷ್ಟೇ ವಿದಾಯ ಹೇಳಿದ 20 ಗ್ರಾಂಡ್​ಸ್ಲ್ಯಾಮ್​ಗಳ ಒಡೆಯ ರೋಜರ್​ ಫೆಡರರ್​ ಬಗ್ಗೆ ಭಾರತದ ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದು, ಟೆನಿಸ್​ ದಂತಕಥೆ ರೋಜರ್​ ಇದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ರೋಜರ್​ ಫೆಡರರ್​ ಅವರ ಸಾಧನೆ, ಒಡನಾಟ, ಭೇಟಿಯನ್ನು ವಿರಾಟ್​ ಕೊಹ್ಲಿ ಈ ವಿಡಿಯೋದಲ್ಲಿ ನೆನೆದಿದ್ದಾರೆ. ಇದನ್ನು ಎಟಿಪಿ ತನ್ನ ಟ್ವಿಟರ್​ನಲ್ಲಿ ಹಂಚಿಕೊಂಡಿದೆ. ವಿಡಿಯೋದ ಆರಂಭದಲ್ಲಿ ರೋಜರ್​ಗೆ ಅಭಿನಂದಿಸುವ ಮೂಲಕ ಮಾತು ಶುರುಮಾಡುವ ಕೊಹ್ಲಿ, ಈ ಅವಕಾಶ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸುವೆ ಎಂದಿದ್ದಾರೆ.

2018 ರಲ್ಲಿ ಆಸ್ಟ್ರೇಲಿಯನ್ ಓಪನ್‌ ವೇಳೆ ರೋಜರ್​ ಭೇಟಿಯಾದ ಬಗ್ಗೆ ಹೇಳಿಕೊಂಡಿದ್ದು, ಇದು ಎಂದಿಗೂ ಮರೆಯಲಾಗದ ದಿನ. ಟೆನಿಸ್​ ಜಗತ್ತಿನ ಅಪ್ರತಿಮ ಪ್ರತಿಭೆ ನೀವು. ಅಂಗಳದಲ್ಲಿ ಮಾತ್ರವಲ್ಲ ಹೊರಗೂ ನೀವು ಸರಳ ಜೀವಿ ಎಂಬುದನ್ನು ನಿಮ್ಮ ಸ್ನೇಹ ಬಳಗವೇ ಹೇಳುತ್ತದೆ. ಸಾರ್ವಕಾಲಿಕ ಶ್ರೇಷ್ಠ ಕ್ರೀಡಾಪಟುವಿನ ಜೀವನದ ಮುಂದಿನ ಹಂತವು ಅಂಗಳದಲ್ಲಿ ಸಿಕ್ಕ ಯಶಸ್ಸಿಗಿಂತಲೂ ದುಪ್ಪಟ್ಟಾಗಲಿ ಎಂದು ಕೋರಿದ್ದಾರೆ.

ವಿರಾಟ್​ಗೆ ಥ್ಯಾಂಕ್ಸ್​ ಹೇಳಿದ ರೋಜರ್​:ವಿರಾಟ್​ ಕೊಹ್ಲಿಯ ಅಭಿನಂದನೆ ವಿಡಿಯೋಗೆ ರೋಜರ್ ಫೆಡರರ್​ ಧನ್ಯವಾದ ಹೇಳಿದ್ದಾರೆ. ಇದರ ತುಣುಕನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಫೆಡರರ್​, "ಧನ್ಯವಾದಗಳು ವಿರಾಟ್​ ಕೊಹ್ಲಿ. ಶೀಘ್ರದಲ್ಲೇ ಭಾರತಕ್ಕೆ ಬರಲು ಎದುರು ನೋಡುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ಸ್ವಿಸ್ ಟೆನಿಸ್ ದಂತಕಥೆಯಾದ ರೋಜರ್​ ಸೆಪ್ಟೆಂಬರ್ 15 ರಂದು ಸ್ಪರ್ಧಾತ್ಮಕ ಟೆನಿಸ್‌ನಿಂದ ನಿವೃತ್ತಿ ಘೋಷಿಸಿದರು. ಇತ್ತೀಚೆಗೆ ಮುಕ್ತಾಯಗೊಂಡ ಲೇವರ್ ಕಪ್​ನಲ್ಲಿ ದೈತ್ಯ ಎದುರಾಳಿ ರಾಫೆಲ್​ ನಡಾಲ್ ಜೊತೆ ಮೊದಲ ಪಂದ್ಯದಲ್ಲಿ ಸೆಣಸಾಡಿ ಸೋಲುವ ಮೂಲಕ ಅಂತಿಮ ವಿದಾಯ ಹೇಳಿದರು.

ವಿದಾಯ ಪಂದ್ಯದ ಬಳಿಕ ಫೆಡರರ್​ ಮತ್ತು ರಾಫೆಲ್​ ನಡಾಲ್​ ಕಣ್ಣೀರು ಹಾಕಿದ್ದು, ಟೆನಿಸ್​ ಜಗತ್ತಿನ ಗಮನ ಸೆಳೆದಿತ್ತು. ಇದರ ವಿಡಿಯೋವನ್ನು ಹಂಚಿಕೊಂಡಿದ್ದ ಕೊಹ್ಲಿ, ಇದು ಕ್ರೀಡಾ ಸೊಬಗು ಎಂದು ವರ್ಣಿಸಿದ್ದರು.

ವೃತ್ತಿಜೀವನದಲ್ಲಿ 1251 ಪಂದ್ಯಗಳನ್ನಾಡಿರುವ ರೋಜರ್​, 103 ಎಟಿಪಿ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇನ್ನು 20 ಗ್ರ್ಯಾಂಡ್ ಸ್ಲಾಮ್ ಗೆದ್ದಿದ್ದು, ಇದರಲ್ಲಿ 8 ವಿಂಬಲ್ಡನ್ ಪ್ರಶಸ್ತಿಗಳನ್ನು ಕೊಳ್ಳೆ ಹೊಡೆದಿದ್ದಾರೆ. ಇದು ಈವರೆಗಿನ ದಾಖಲೆಯಾಗಿದೆ.

ಓದಿ:ಗೆಳತಿ ಜೊತೆ ಡೇಟಿಂಗ್​ಗಾಗಿ 300 ರೂ ಕೇಳಿದ ಅಭಿಮಾನಿ.. 500 ರೂ ಗೂಗಲ್​ ಪೇ ಮಾಡಿದ ಅಮಿತ್​ ಮಿಶ್ರಾ

ABOUT THE AUTHOR

...view details