ನವದೆಹಲಿ:ಈಜಿಪ್ಟ್ನ ಕೈರೋದಲ್ಲಿ ನಡೆದ ಜೂನಿಯರ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತದ ರಮಿತಾ ಅವರು 10 ಮೀಟರ್ ರೈಫಲ್ ಸ್ಪರ್ಧೆಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಚೀನಾದ ಯಿಂಗ್ ಶೆನ್ರನ್ನು 16- 12 ಅಂಕಗಳ ಅಂತರದಿಂದ ಸೋಲಿಸಿದರು.
ಈಜಿಪ್ಟ್ ಇಂಟರ್ನ್ಯಾಷನಲ್ ಒಲಿಂಪಿಕ್ ಸಿಟಿ ಶೂಟಿಂಗ್ ರೇಂಜ್‌ನಲ್ಲಿ ನಡೆದ ಏಳನೇ ದಿನದ ಸ್ಪರ್ಧೆಯಲ್ಲಿ 50 ಮೀ ಪಿಸ್ತೂಲ್ ಮಹಿಳಾ ಜೂನಿಯರ್ ಸ್ಪರ್ಧೆಯಲ್ಲಿ ಭಾರತ 1-2-3 ಫಿನಿಶ್ ಕಂಡಿದೆ. ಈ ಮೂಲಕ 10 ಚಿನ್ನ, 5 ಬೆಳ್ಳಿ 10 ಕಂಚು ಸೇರಿದಂತೆ 25 ಪದಕಗಳನ್ನು ಕೊಳ್ಳೆ ಹೊಡೆಯಿತು. ಪದಕ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ.
ಫೈನಲ್ ಸುತ್ತಿನ ಹಣಾಹಣಿಯಲ್ಲಿ ಯಿಂಗ್ ಶೆನ್ ಮತ್ತು ರಮಿತಾ ಸಮಬಲದ ಸ್ಪರ್ಧೆ ನೀಡಿದ್ದರು. ಬಳಿಕ ಪುಟಿದೆದ್ದ ರಮಿತಾ ಕೊನೆಯಲ್ಲಿ ನಿಖರ ಗುರಿ ಇಟ್ಟು 16-12 ರಲ್ಲಿ ಚಿನ್ನ ಗೆದ್ದರು. 629 ಅಂಕಗಳೊಂದಿಗೆ ಫೈನಲ್ಗೆ ಲಗ್ಗೆ ಇಟ್ಟಿದ್ದ ರಮಿತಾ ಅಂತಿಮ ಪಂದ್ಯದಲ್ಲಿ 262.8 ಅಂಕ ಸಂಪಾದನೆಯೊಂದಿಗೆ ಚಾಂಪಿಯನ್ ಆದರು.
ಇನ್ನೊಬ್ಬ ಶೂಟರ್ ತಿಲೋತ್ತಮಾ ಸೇನ್ ದಿನದಾಟದಲ್ಲಿ ಕಂಚು ಗೆಲ್ಲುವ ಮೂಲಕ ಭಾರತಕ್ಕೆ ಎರಡನೇ ಪದಕ ತಂದರು. 261.0 ಪಾಯಿಂಟ್ಸ್ ಗಳಿಸುವ ಮೂಲಕ ಮೂರನೇ ಸ್ಥಾನ ಪಡೆದರು.
50 ಮೀಟರ್ ಪಿಸ್ತೂಲ್ ಮಹಿಳಾ ಜೂನಿಯರ್ ಸ್ಪರ್ಧೆಯಲ್ಲಿ ಭಾರತ ಪಾರಮ್ಯ ಸಾಧಿಸಿತು. ದಿವಾನ್ಶಿ 547 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ವರ್ಷಾ ಸಿಂಗ್ 539 ಪಾಯಿಂಟ್ಸ್ಗಳೊಂದಿಗೆ 2ನೇ ಸ್ಥಾನ ಮತ್ತು ತಿಯಾನಾ 523 ಅಂಕ ಜೊತೆಗೆ ಮೂರನೇ ಸ್ಥಾನ ಪಡೆದರು. ಇದಲ್ಲದೇ, ಖುಷಿ ಕಪೂರ್ 521 ಪಾಯಿಂಟ್ಸ್ ಪಡೆದು ನಾಲ್ಕನೇ ಸ್ಥಾನವನ್ನು ಪಡೆಯಿತು. 25 ಮೀ ಸ್ಟ್ಯಾಂಡರ್ಡ್ ಪಿಸ್ತೂಲ್ ಮಹಿಳಾ ಸ್ಪರ್ಧೆಯಲ್ಲಿ ರಿದಂ ಸಾಂಗ್ವಾನ್ ಬೆಳ್ಳಿ ಸಾಧನೆ ಮಾಡಿದರು.
ಪುರುಷರ ವಿಭಾಗ:ಇನ್ನು 50 ಮೀ ಪಿಸ್ತೂಲ್ ಪುರುಷರ ಜೂನಿಯರ್ ಸ್ಪರ್ಧೆಯಲ್ಲಿ ಭಾರತದ ಅಭಿನವ್ ಚೌಧರಿ ಎರಡನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಗೆದ್ದರು. ಅಭಿನವ್ ಕೊರಿಯಾದ ಸಾಂಗ್ ಸಿಯುಂಘೋ ವಿರುದ್ಧ ಜಯ ಸಾಧಿಸಿದರು. 25 ಮೀಟರ್ ಸ್ಟ್ಯಾಂಡರ್ಡ್ ಪಿಸ್ತೂಲ್ ಶೂಟಿಂಗ್ನಲ್ಲಿ ವಿಜಯವೀರ್ ಸಿಧು ಮೂರನೇ ಸ್ಥಾನ ಪಡೆದು ಕಂಚು ಗೆದ್ದರು.
ಓದಿ:ಸಾಧನೆಯ ಬೌಂಡರಿ..! ಕೊಹ್ಲಿ, ರೋಹಿತ್, ಬಾಬರ್ ಹಿಂದಿಕ್ಕಿದ ಐರ್ಲೆಂಡ್ ಆಟಗಾರ