ಲಂಡನ್:22 ಗ್ರ್ಯಾಂಡ್ ಸ್ಲಾಮ್ಗಳ ಒಡೆಯ ಸ್ಪೇನ್ನ ರಾಫೆಲ್ ನಡಾಲ್ ಹೊಟ್ಟೆನೋವಿನ ನಡುವೆಯೇ ಅಮೆರಿಕದ ಟೈಲರ್ ಫ್ರಿಟ್ಜ್ರನ್ನು ಸೋಲಿಸಿ ವಿಂಬಲ್ಡನ್ ಟೂರ್ನಿಯ ಪುರುಷರ ಸಿಂಗಲ್ಸ್ನಲ್ಲಿ ಸೆಮಿಫೈನಲ್ ತಲುಪಿದರು. ಫ್ರೆಂಚ್ ಓಪನ್ ಚಾಂಪಿಯನ್ 36 ವರ್ಷದ ನಡಾಲ್ಗೆ 24 ವರ್ಷದ ಟೈಲರ್ ಫ್ರಿಟ್ಜ್ ಭಾರಿ ಸವಾಲು ಒಡ್ಡಿದರು. ಸೆಂಟರ್ ಕೋರ್ಟ್ನಲ್ಲಿ ನಡೆದ ಪಂದ್ಯ 5 ಸೆಟ್ಗಳನ್ನು ಕಂಡಿತು.
ಪಂದ್ಯದ ಮಧ್ಯೆ ಹೊಟ್ಟೆ ನೋವು:ಈ ಪಂದ್ಯದಲ್ಲಿ ನಡಾಲ್ ತಮ್ಮ ಅನುಭವವನ್ನೆಲ್ಲ ಧಾರೆ ಎರೆದು ಟೈಲರ್ ವಿರುದ್ಧ 3-6, 7-5, 3-6, 7-5, 7-6 (10-4) ಅಂತರದಲ್ಲಿ ಗೆಲುವು ಸಾಧಿಸಿದರು. ಪಂದ್ಯದ ಮೊದಲ ಸೆಟ್ ಅನ್ನು ಟೈಲರ್ 3-6 ರಿಂದ ಗೆದ್ದರು. ಬಳಿಕ ನಡಾಲ್ 2ನೇ ಸೆಟ್ ಅನ್ನು 7-5 ರಲ್ಲಿ ವಶಪಡಿಸಿಕೊಂಡರು. ಈ ಸಂದರ್ಭದಲ್ಲಿ ಹೊಟ್ಟೆ ನೋವಿಗೀಡಾದರು. ಫಿಜಿಯೋ ತಪಾಸಣೆಯ ಬಳಿಕ ಮತ್ತೆ ಮೈದಾನಕ್ಕಿಳಿದ ನಡಾಲ್ ನೋವಿನ ಮಧ್ಯೆಯೇ ಆಟ ಮುಂದುವರಿಸಿದರು.
3ನೇ ಸೆಟ್ ಅನ್ನು ಮತ್ತೆ 3-6 ರಿಂದ ಗೆದ್ದ ಟೈಲರ್ ಅನುಭವಿ ಆಟಗಾರನಿಗೆ ಸವಾಲೆಸೆದರು. ಮುಂದಿನ 4 ಮತ್ತು 5ನೇ ಸೆಟ್ ಅನ್ನು ನಡಾಲ್ 7-5, 7-6 ರಲ್ಲಿ ತಮ್ಮದಾಗಿಸಿಕೊಂಡರು. ಬಳಿಕ ನಡೆದ ಟೈ ಬ್ರೇಕರ್ನಲ್ಲಿ ಟೈಲರ್ ವಿರುದ್ಧ ಪಾರಮ್ಯ ಮೆರೆದ ರಾಫ್ 10-4 ಅಂತರದಲ್ಲಿ ಪಂದ್ಯ ಗೆದ್ದರು.