ಸಿಂಗಾಪುರ:ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ, ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ 21-9, 11-21, 21-15 ಸೆಟ್ಗಳಿಂದ ಚೀನಾದ ವಾಂಗ್ ಝಿ ಯಿ ವಿರುದ್ಧ ಜಯಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಈ ಮೂಲಕ ಮೊದಲ ಬಾರಿಗೆ ಸೂಪರ್ 500 ಟ್ರೋಫಿ ಜಯಿಸುವಲ್ಲಿ ಸಫಲರಾದರು. ಅಲ್ಲದೇ, ಈ ವರ್ಷದ ಸಯ್ಯದ್ ಮೋದಿ ಅಂತಾರಾಷ್ಟ್ರೀಯ ಟ್ರೋಫಿ, ಸ್ವಿಸ್ ಓಪನ್ ಪ್ರಶಸ್ತಿ ಜಯಿಸಿದ್ದ ಸಿಂಧು ಇದೀಗ ಸಿಂಗಾಪುರ ಓಪನ್ ಮೂಲಕ 3ನೇ ಪ್ರಶಸ್ತಿಗೆ ಮುತ್ತಿಟ್ಟರು.
ಮೊದಲ ಗೇಮ್ನಲ್ಲಿ ಆಕ್ರಮಣಕಾರಿ ಆಟವಾಡಿದ ಸಿಂಧು 21-9 ರಲ್ಲಿ ಗೆಲುವು ಪಡೆದರು. ಬಳಿಕ 2ನೇ ಸೆಟ್ನಲ್ಲಿ ಭಾರತೀಯ ಆಟಗಾರ್ತಿಗೆ ಸವಾಲೊಡ್ಡಿದ ವಾಂಗ್ ಝಿ ಯಿ 21-11 ರಲ್ಲಿ ವಶಪಡಿಸಿಕೊಂಡರು. 3ನೇ ಮತ್ತು ನಿರ್ಣಾಯಕ ಗೇಮ್ನಲ್ಲಿ ಎಚ್ಚರಿಕೆಯಿಂದ ಆಟವಾಡಿದ ಸಿಂಧು ಚೀನಾ ಆಟಗಾರ್ತಿಯನ್ನು 21-15 ರಲ್ಲಿ ಸೋಲಿಸಿ ಪ್ರಶಸ್ತಿಯನ್ನು ಜಯಿಸಿದರು. ಈ ಪಂದ್ಯ 1 ಗಂಟೆ 2 ನಿಮಿಷಗಳ ಕಾಲ ನಡೆಯಿತು.