ನವದೆಹಲಿ:ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು 2022ರ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್ ಆಡುತ್ತಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಪಿವಿ ಸಿಂಧು ಅವರು ಟ್ವೀಟ್ ಮಾಡಿದ್ದು, 'ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ಸಂತಸದಲ್ಲಿರುವ ನಾನು ದುರದೃಷ್ಟವಶಾತ್ ವಿಶ್ವ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿಯಬೇಕಾಗಿದೆ' ಎಂದು ತಿಳಿಸಿದ್ದಾರೆ.
ಸಿಂಧು ಈ ಹಿಂದೆ ಒಲಿಂಪಿಕ್ ಗೇಮ್ಸ್‌ನಲ್ಲಿ ಭಾರತದ ಪರ ಬೆಳ್ಳಿ ಮತ್ತು ಕಂಚು ಗೆದ್ದಿದ್ದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬೆಳ್ಳಿ, ಎರಡು ಕಂಚು ಹಾಗೇ 2019ರಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ ಕ್ವಾರ್ಟರ್-ಫೈನಲ್‌ನಲ್ಲಿ ಸಿಂಧುಗೆ ತೀವ್ರ ನೋವು ಕಾಣಿಸಿಕೊಂಡಿತ್ತು.
ಸಿಂಧು ಹೇಳಿಕೆಯಲ್ಲಿ, 'ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನಂತರ ನಾನು ಸಂತೋಷದ ಉತ್ತುಂಗದಲ್ಲಿದ್ದೇನೆ. ದುರದೃಷ್ಟವಶಾತ್ ನಾನು ವಿಶ್ವ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿಯಬೇಕಾಗಿದೆ. ಕಾಮನ್‌ವೆಲ್ತ್ ಗೇಮ್ಸ್‌ನ ಕ್ವಾರ್ಟರ್-ಫೈನಲ್‌ನಲ್ಲಿ ನೋವಿನ ಸಮಸ್ಯೆ ಕಾಡಿತ್ತು. ಆದರೆ ನನ್ನ ತರಬೇತುದಾರ, ಫಿಸಿಯೋ ಸಹಾಯದಿಂದ ನಾನು ಆಟ ಮುಂದುವರೆಸಲು ನಿರ್ಧರಿಸಿದೆ' ಎಂದಿದ್ದಾರೆ.
'ಕಾಮನ್‌ವೆಲ್ತ್ ಫೈನಲ್ ಸಮಯದಲ್ಲಿ ಮತ್ತು ನಂತರ ನೋವು ಜಾಸ್ತಿಯಾಗಿತ್ತು. ಹೀಗಾಗಿ ನಾನು ಹೈದರಾಬಾದ್‌ಗೆ ಹಿಂತಿರುಗಿದ ತಕ್ಷಣ, ಎಂಆರ್‌ಐ ಮಾಡಿಸಿಕೊಂಡೆ. ಒತ್ತಡದ ಕಾರಣ ಎಡಗಾಲಿನಲ್ಲಿ ಮುರಿತವಾಗಿರುವುದನ್ನು ವೈದ್ಯರು ದೃಢಪಡಿಸಿದ್ದು, ಕೆಲವು ವಾರಗಳ ಕಾಲ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ. ವಿಶ್ರಾಂತಿಯ ನಂತರ ನಾನು ಮತ್ತೆ ಅಭ್ಯಾಸ ಪ್ರಾರಂಭಿಸುತ್ತೇನೆ. ನಿಮ್ಮ ಬೆಂಬಲ ಮತ್ತು ಪ್ರೀತಿಗಾಗಿ ಎಲ್ಲರಿಗೂ ಧನ್ಯವಾದಗಳು' ಎಂದು ಟ್ವಿಟರ್ನಲ್ಲಿ ಸಿಂಧು ಪೋಸ್ಟ್ ಮಾಡಿಕೊಂಡಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಟೋಕಿಯೊದಲ್ಲಿ ಆಗಸ್ಟ್ 21ರಿಂದ ಆಗಸ್ಟ್ 28ರವರೆಗೆ ನಡೆಯಲಿದೆ.
ಇದನ್ನೂ ಓದಿ :ಪ್ರಧಾನಿ ನರೇಂದ್ರ ಮೋದಿಗೆ ಬಾಕ್ಸಿಂಗ್ ಗ್ಲೌಸ್ ಉಡುಗೊರೆ ಕೊಟ್ಟ ನಿಖತ್ ಜರೀನ್