ನವದೆಹಲಿ:ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಗೆದ್ದಿದ್ದ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಶ್ರೇಯಾಂಕ ಕುಸಿದಿದೆ. ನಿನ್ನೆ (ಮಾ.28) ಬಿಡುಗಡೆಯಾದ ಮಹಿಳಾ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್(ಬಿಡಬ್ಲ್ಯೂಎಫ್) ಶ್ರೇಯಾಂಕದಲ್ಲಿ ಸಿಂಧು 10ರೊಳಗಿನ ಪಟ್ಟಿಯಿಂದ ಕೆಳಗಿಳಿದಿದ್ದಾರೆ.
ಮಂಗಳವಾರ ಪ್ರಕಟವಾದ ಮಹಿಳೆಯರ ಸಿಂಗಲ್ಸ್ ಕ್ರಮಾಂಕದಲ್ಲಿ ಸಿಂಧು 11ನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ನಿರೀಕ್ಷಿತ ಸಾಮರ್ಥ್ಯ ತೋರುವಲ್ಲಿ ವಿಫಲವಾಗುತ್ತಿರುವ ಸಿಂಧು ಕಳೆದ ವಾರ ನಡೆದ ಸ್ವಿಸ್ ಓಪನ್ ಟೂರ್ನಿಯಲ್ಲೂ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. 27 ವರ್ಷದ ಬ್ಯಾಡ್ಮಿಂಟನ್ ತಾರೆಯ ಬಳಿ ಸದ್ಯ 60,448 ಪಾಯಿಂಟ್‌ಗಳಿವೆ. ಒಂದು ಕಾಲದಲ್ಲಿ ಜೀವನ ಶ್ರೇಷ್ಠ 2ನೇ ರ್‍ಯಾಂಕ್‌ನಲ್ಲಿದ್ದ ಸಿಂಧು 2016ರ ನವೆಂಬರ್‌ನಿಂದ ಆರು ವರ್ಷಗಳ ಅಗ್ರ 10ರೊಳಗಿನವರ ಪಟ್ಟಿಯಲ್ಲಿದ್ದರು.
ಆಗಸ್ಟ್ 2013ರಲ್ಲಿ ಮೊದಲ ಬಾರಿಗೆ ಟಾಪ್ 10ರಲ್ಲಿ ಸ್ಥಾನ ಪಡೆಯುವಲ್ಲಿ ಸಿಂಧು ಯಶಸ್ವಿಯಾಗಿದ್ದರು. ಸೈನಾ ನೆಹ್ವಾಲ್ ಕೂಡ ಹೊಸ ಶ್ರೇಯಾಂಕದಲ್ಲಿ ಸೋಲು ಅನುಭವಿಸಿದ್ದಾರೆ. 36,600 ಅಂಕಗಳೊಂದಿಗೆ 31ನೇ ಸ್ಥಾನದಲ್ಲಿದ್ದಾರೆ. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ತ್ರಿಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ 43501 ಅಂಕಗಳೊಂದಿಗೆ 18ನೇ ಸ್ಥಾನದಲ್ಲಿದ್ದಾರೆ.
ಪುರುಷರ ಬಿಡಬ್ಲ್ಯೂಎಫ್ ಸಿಂಗಲ್ಸ್..: ವಿಭಾಗದಲ್ಲಿ ಹೆಚ್.ಎಸ್.ಪ್ರಣಯ್ 8ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಸದ್ಯ ಇವರು ಅವರು 64347 ಅಂಕಗಳನ್ನು ಹೊಂದಿದ್ದಾರೆ. ಕಿದಂಬಿ ಶ್ರೀಕಾಂತ್ ಮತ್ತು ಲಕ್ಷ್ಯ ಸೇನ್ ಕ್ರಮವಾಗಿ 21 ಹಾಗೂ 25ನೇ ಸ್ಥಾನದಲ್ಲಿದ್ದಾರೆ. ಸ್ವಿಸ್ ಓಪನ್ ಚಾಂಪಿಯನ್‌ಗಳಾದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಡಬಲ್ಸ್ ವಿಭಾಗದಲ್ಲಿ 68,246 ಅಂಕಗಳೊಂದಿಗೆ 6ನೇ ಕ್ರಮಾಂಕದಲ್ಲಿ ಮುಂದುವರೆದಿದ್ದಾರೆ. ಎಂ.ಆರ್ ಅರ್ಜುನ್ ಮತ್ತು ಧ್ರುವ ಕಪಿಲ ಜೋಡಿ 40238 ಅಂಕಗಳೊಂದಿಗೆ 26ನೇ ಸ್ಥಾನದಲ್ಲಿದ್ದಾರೆ.