ಮ್ಯಾಡ್ರಿಡ್ (ಸ್ಪೇನ್) :ವೃತ್ತಿಪರ ಟೆನ್ನಿಸ್ನಲ್ಲಿ ನನಗೆ 2024 ಬಹುಶಃ ಕೊನೆಯ ವರ್ಷವಾಗಲಿದೆ ಹಾಗೂ ಅನಿರ್ದಿಷ್ಟ ಸಮಯದಲ್ಲೇ ದೂರ ಸರಿಯಬಹುದು ಎಂದು 22 ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಗಳ ಒಡೆಯ ಸ್ಪೇನ್ನ ಚಾಂಪಿಯನ್ ರಾಫೆಲ್ ನಡಾಲ್ ಗುರುವಾರ ಹೇಳಿದ್ದಾರೆ. 14 ಬಾರಿ ಫ್ರೆಂಚ್ ಓಪನ್ ಗೆದ್ದಿರುವ ''ಆವೆ ಮಣ್ಣಿನ ರಾಜ'' ಖ್ಯಾತಿಯ ನಡಾಲ್ ಈ ಬಾರಿ ರೋಲ್ಯಾಂಡ್ ಗ್ಯಾರೋಸ್‌ನಿಂದ ಹಿಂದೆ ಸರಿಯುವುದಾಗಿ ರಾಫೆಲ್ ನಡಾಲ್ ಅಕಾಡೆಮಿಯಲ್ಲಿ ಗುರುವಾರ ಘೋಷಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಡಾಲ್, 2024ನ್ನು ಆನಂದಿಸುವ ಅವಕಾಶ ಪಡೆಯಲು ಸದ್ಯ ಟೆನ್ನಿಸ್ನಿಂದ ವಿರಾಮ ಪಡೆಯಲು ನಿರ್ಧರಿಸಿದ್ದೇನೆ. ಇದು ವೃತ್ತಿಪರ ಟೆನ್ನಿಸ್ ಆಟಗಾರನಾಗಿ ನನಗೆ ಬಹುಶಃ ಕೊನೆಯ ವರ್ಷವಾಗಿದೆ ಎಂದು ಹೇಳುವ ಮೂಲಕ ನಿವೃತ್ತಿ ಬಗ್ಗೆ ಸುಳಿವು ನೀಡಿದ್ದಾರೆ. ''ಅನಾರೋಗ್ಯದ ಹಿನ್ನೆಲೆಯಲ್ಲಿ ಮುಂದಿನ ವರ್ಷ ವೃತ್ತಿಜೀವನದಿಂದ ವಿರಾಮದ ಬಗ್ಗೆ ಯೋಚಿಸುತ್ತಿದ್ದೇನೆ. 2024 ಬಹುಶಃ ವೃತ್ತಿಪರ ಪ್ರವಾಸದಲ್ಲಿ ನನ್ನ ಕೊನೆಯ ವರ್ಷವಾಗಬಹುದು. ನನ್ನ ಗುರಿ ಮತ್ತು ಮಹತ್ವಾಕಾಂಕ್ಷೆಯನ್ನೆಲ್ಲ ಮುಂದಿನ ವರ್ಷ ಆನಂದಿಸಲು ಯತ್ನಿಸುತ್ತೇನೆ" ಎಂದು ಅವರು ಹೇಳಿದರು.
ಸುಮಾರು ಎರಡು ದಶಕಗಳ ಟೆನ್ನಿಸ್ನಲ್ಲಿ ಮೊದಲ ಬಾರಿಗೆ ಜನವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಉಂಟಾದ ಸೊಂಟದ ಗಾಯದಿಂದಾಗಿ ನಡಾಲ್ ಬಳಿಕ ಫ್ರೆಂಚ್ ಓಪನ್‌ನಿಂದಲೂ ಗಾಯದಿಂದ ನಿವೃತ್ತರಾಗಿದ್ದರು. 36 ವರ್ಷದ ಎಡಗೈ ಚಾಂಪಿಯನ್ ಜನವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್‌ನಲ್ಲಿಯೂ ಅಂಗಳಕ್ಕಿಳಿದಿಲ್ಲ. ಅಲ್ಲಿ ತಮ್ಮ ಎಡಗಾಲಿನ ಇಲಿಯೋಪ್ಸೋಸ್ ಸ್ನಾಯುವಿನ ಗಾಯಕ್ಕೊಳಗಾಗಿದ್ದಾರೆ. ನಡಾಲ್ ಆರರಿಂದ ಎಂಟು ವಾರಗಳ ವಿಶ್ರಾಂತಿ ಪಡೆದು ಹಿಂದಿರುಗುವ ನಿರೀಕ್ಷೆ ಹೊಂದಿದ್ದರೂ ಕೂಡ ಅದು ಇನ್ನೂ ಸಹ ಸಾಧ್ಯವಾಗಿಲ್ಲ.
"ನನಗೆ ಈ ಬಗ್ಗೆ ಶೇಕಡಾ 100ರಷ್ಟು ಹೇಳಲು ಸಾಧ್ಯವಿಲ್ಲ. ಏಕೆಂದರೆ ಮುಂದೇನಾಗಲಿದೆ ಎಂಬುದು ನಮಗೆ ಗೊತ್ತಿಲ್ಲ. ಆದರೆ ಪ್ರೇರಣಾತ್ಮಕ ಹಾಗೂ ಆಟವನ್ನು ಆನಂದಿಸುತ್ತ ವಿದಾಯ ಹೇಳಲು ಯತ್ನಿಸುತ್ತೇನೆ. ಮುಂದಿನ ವರ್ಷ ನನ್ನ ಟೆನ್ನಿಸ್ ವೃತ್ತಿಜೀವನದಲ್ಲಿ ಎದುರಾಗುವ ಪಂದ್ಯಾವಳಿಗಳು ಅತ್ಯಂತ ಮುಖ್ಯವಾಗಿದ್ದು, ಅಂಗಳದಲ್ಲಿ ಸ್ಪರ್ಧಾತ್ಮಕವಾಗಿ ಆಡುತ್ತ ಎಂಜಾಯ್ ಮಾಡುತ್ತೇನೆ'' ಎಂದು ನಡಾಲ್ ಆಶಯ ವ್ಯಕ್ತಪಡಿಸಿದ್ದಾರೆ.