ಕರ್ನಾಟಕ

karnataka

ETV Bharat / sports

ಪ್ರೊ ಕಬಡ್ಡಿ: ಪಾಟ್ನಾ ಪೈರೇಟ್ಸ್​ ತಂಡಕ್ಕೆ ರಾಜ್ಯದ ಪ್ರಶಾಂತ್ ರೈ ನಾಯಕನಾಗಿ ಆಯ್ಕೆ

ಉದ್ಯೋಗದ ಜತೆ ಜತೆಗೆ ಸಂಜೆ ಕಂಠೀರವ ಕ್ರೀಡಾಂಗಣದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದ ಪ್ರಶಾಂತ್‌, ಭಾರತ ತಂಡವನ್ನು ಪ್ರತಿನಿಧಿಸಬೇಕೆಂಬ ಮಹದಾಸೆ ಹೊಂದಿದ್ದರು. ಆದರೆ, ಅದು ಇನ್ನೂ ಕೈಗೂಡಿಲ್ಲ. ಅದರೂ ವಿಜಯ ಬ್ಯಾಂಕ್‌ ಮತ್ತು ರಾಜ್ಯ ತಂಡದ ಪ್ರಮುಖ ಅಸ್ತಿಯಾಗಿ ಗುರುತಿಸಿಕೊಂಡಿದ್ದಾರೆ..

prashant rai
ಪಾಟ್ನಾ ಪೈರೇಟ್ಸ್​ ತಂಡಕ್ಕೆ ರಾಜ್ಯದ ಪ್ರಶಾಂತ್ ರೈ ನಾಯಕ

By

Published : Nov 30, 2021, 7:09 PM IST

ಪುತ್ತೂರು :ಪ್ರೊ ಕಬಡ್ಡಿಯ ತಂಡವಾದ ಪಾಟ್ನಾ ಪೈರೇಟ್ಸ್​ನ ನಾಯಕರಾಗಿ ಕರ್ನಾಟಕದ ತಂಡದ ಮಾಜಿ ನಾಯಕ ಪುತ್ತೂರಿನ ಪ್ರಶಾಂತ್ ರೈ ಆಯ್ಕೆಯಾಗಿದ್ದಾರೆ. ಕರ್ನಾಟಕ ಕಬಡ್ಡಿ ತಂಡದ ಮಾಜಿ ನಾಯಕ 36ರ ಹರೆಯದ ಪ್ರಶಾಂತ್‌, ವಿಜಯ ಬ್ಯಾಂಕ್‌ನ ಕಬಡ್ಡಿ ತಂಡದ ನಾಯಕರಾಗಿದ್ದಾರೆ.

ಪ್ರೊ ಕಬಡ್ಡಿ ಲೀಗ್‌ನ ಮೊದಲ 3 ಆವೃತ್ತಿಗಳಲ್ಲಿ ತೆಲುಗು ಟೈಟನ್ಸ್‌ ತಂಡದ ಸದಸ್ಯರಾಗಿದ್ದರು. ನಂತರ ದಬಾಂಗ್‌ ಡೆಲ್ಲಿ, ಹರಿಯಾಣ ಸ್ಟೀಲರ್ಸ್‌ ಹಾಗೂ ಯುಪಿ ಯೋಧ ತಂಡವನ್ನು ಪ್ರತಿನಿಧಿಸಿದ್ದರು. 2021ನೇ ಸಾಲಿನಲ್ಲಿ ಪಾಟ್ನಾ ಪೈರೇಟ್ಸ್ ತಂಡದ ನಾಯಕರಾಗಿದ್ದಾರೆ. 55 ಲಕ್ಷ ರೂಪಾಯಿ ಮೊತ್ತಕ್ಕೆ ತಂಡ ಅವರನ್ನು ಖರೀದಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪ್ರಶಾಂತ್‌ ಪತ್ನಿ ವಜ್ರೇಶ್ವರಿ ರೈ ಮತ್ತು ಪುತ್ರ ಶತಾಯು ರೈ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ಸೀತಾರಾಮ್‌ ಕರ್ನಾಟಕ ಸಾರಿಗೆ ಸಂಸ್ಥೆಯ ಉದ್ಯೋಗಿಯಾಗಿದ್ದರು.

ವೇಟ್​ಲಿಫ್ಟರ್​ನಿಂದ ಕಬಡ್ಡಿ ಪ್ಲೇಯರ್​

ವೇಟ್‌ಲಿಫ್ಟರ್‌ ಆಗಬೇಕೆಂದುಕೊಂಡಿದ್ದ ಪ್ರಶಾಂಶ್‌, ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಮೈದಾನದಲ್ಲಿ ಕಬಡ್ಡಿ ಕ್ರೀಡೆಗಾಗಿ ಬೆವರಿಳಿಸಿದರು. ಕೋಚ್‌ ಹಬೀಬ್‌ ಮತ್ತು ಫಿಲೋಮಿನಾ ಕಾಲೇಜಿನ ಕೋಚ್‌ ಇಲಿಯಾಸ್‌ ಪಿಂಟೋ ಅವರ ಮಾರ್ಗದರ್ಶನದಲ್ಲಿ ಕಬಡ್ಡಿ ಆಟದ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಸತತ ಮೂರು ವರ್ಷ ಮಂಗಳೂರು ಅಂತರ್‌ಕಾಲೇಜು ಟೂರ್ನಿಗಳಲ್ಲಿ ಫಿಲೋಮಿನಾ ಕಾಲೇಜಿಗೆ ಟ್ರೋಫಿ ಗೆದ್ದುಕೊಟ್ಟ ಪ್ರಶಾಂತ್‌, ಅಂತರ ವಿಶ್ವವಿದ್ಯಾಲಗಳ ಕಬಡ್ಡಿ ಟೂರ್ನಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು. ಫಿಲೋಮಿನಾ ಕಾಲೇಜಿನಲ್ಲಿ ಪದವಿ ಪಡೆದ ಪ್ರಶಾಂತ್‌ಗೆ ಬದುಕು ಕಲ್ಪಿಸಿದ್ದು ಬೆಂಗಳೂರಿನ ವಿಜಯ ಬ್ಯಾಂಕ್‌.

ಉದ್ಯೋಗದ ಜತೆ ಜತೆಗೆ ಸಂಜೆ ಕಂಠೀರವ ಕ್ರೀಡಾಂಗಣದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದ ಪ್ರಶಾಂತ್‌, ಭಾರತ ತಂಡವನ್ನು ಪ್ರತಿನಿಧಿಸಬೇಕೆಂಬ ಮಹದಾಸೆ ಹೊಂದಿದ್ದರು. ಆದರೆ, ಅದು ಇನ್ನೂ ಕೈಗೂಡಿಲ್ಲ. ಅದರೂ ವಿಜಯ ಬ್ಯಾಂಕ್‌ ಮತ್ತು ರಾಜ್ಯ ತಂಡದ ಪ್ರಮುಖ ಅಸ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ದಾಖಲೆ ಮೊತ್ತಕ್ಕೆ ಹರಾಜು

6ನೇ ಕಬಡ್ಡಿ ಆವೃತ್ತಿಯ ಹರಾಜಿನಲ್ಲಿ ಪ್ರಶಾಂತ್‌ ಕುಮಾರ್‌ ರೈ, ಯುಪಿ ಯೋಧಾಸ್‌ ತಂಡಕ್ಕೆ 79 ಲಕ್ಷ ರೂ.ಗಳಿಗೆ ಮಾರಾಟಗೊಂಡಿದ್ದರು. ಈ ಮೂಲಕ ರಾಜ್ಯದ ಪರ ಅತ್ಯಧಿಕ ಮೊತ್ತ ಪಡೆದ ಮೊದಲ ಆಟಗಾರ ಎಂಬ ಶ್ರೇಯ ಪಡೆದಿದ್ದರು. ಈ ಬಾರಿಯ ಪ್ರೊ ಕಬಡ್ಡಿ ಲೀಗ್​ನ ಸೀಸನ್ 8ರ ಪಂದ್ಯಗಳು ಡಿ.22ರಿಂದ ಬೆಂಗಳೂರಿನಲ್ಲಿ ನಡೆಯಲಿವೆ.

ABOUT THE AUTHOR

...view details