ಮುಂಬೈ:ಪ್ರಸಕ್ತ ಸಾಲಿನ ಪ್ರೊ ಕಬಡ್ಡಿ ಲೀಗ್ಗೋಸ್ಕರ ಆಟಗಾರರ ಹರಾಜು ಪ್ರಕ್ರಿಯೆ ನಾಳೆ ಮತ್ತು ನಾಡಿದ್ದು ನಡೆಯಲಿದ್ದು, ಪ್ರಮುಖ ಆಟಗಾರರ ಮೇಲೆ 12 ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಪ್ರಮುಖವಾಗಿ ಬೆಂಗಳೂರು ಬುಲ್ಸ್ ತಂಡದಿಂದ ರಿಲೀಸ್ ಆಗಿರುವ ಕ್ಯಾಪ್ಟನ್ ಪವನ್ ಶೆರಾವತ್ ಯಾವ ತಂಡ ಸೇರಿಕೊಳ್ತಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಆಗಸ್ಟ್ 5 ಮತ್ತು 6ರಂದು ಮುಂಬೈನ ಖಾಸಗಿ ಹೋಟೆಲ್ನಲ್ಲಿ ಹರಾಜು ನಡೆಯಲಿದೆ ಎಂದು ಪಿಕೆಎಲ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಲಾಗಿದೆ. ಹರಾಜು ಪ್ರಕ್ರಿಯೆಯಲ್ಲಿ 500ಕ್ಕೂ ಅಧಿಕ ಆಟಗಾರರು ಭಾಗಿಯಾಗುವ ಸಾಧ್ಯತೆ ಇದೆ. ಪ್ರತಿ ತಂಡಕ್ಕೆ 24 ಆಟಗಾರರನ್ನು ಖರೀದಿಸುವ ಅವಕಾಶವಿದೆ. ಹರಾಜು ಪ್ರಕ್ರಿಯೆಯಲ್ಲಿ ದೇಶೀಯ, ಸಾಗರೋತ್ತರ ಮತ್ತು ಹೊಸ ಯುವ ಆಟಗಾರರು ಎಂಬ ನಾಲ್ಕು ವಿಭಾಗ ಮಾಡಲಾಗಿದೆ. ನಾಳೆ ಸಂಜೆ 6:30ಕ್ಕೆ ಹರಾಜು ಪ್ರಕ್ರಿಯೆ ಆರಂಭಗೊಳ್ಳಲಿದೆ.
ಇದನ್ನೂ ಓದಿ:ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿ.. ಹರಾಜು ಪ್ರಕ್ರಿಯೆಗೆ ದಿನಾಂಕ ಪ್ರಕಟ
ಆಲ್ರೌಂಡರ್, ಡಿಫೆಂಡರ್, ರೈಡರ್ ಎಂಬ A,B,C,D ಯಂತೆ ವಿಭಾಗಿಸಲಾಗಿದೆ. A ವಿಭಾಗಕ್ಕೆ 30 ಲಕ್ಷ ರೂ. B ವಿಭಾಗದಲ್ಲಿ 20 ಲಕ್ಷ ರೂ. C ವಿಭಾಗದಲ್ಲಿ 10 ಲಕ್ಷ ರೂ ಹಾಗೂ D ಕೆಟಗರಿಯಲ್ಲಿ 6 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಪ್ರತಿ ಫ್ರಾಂಚೈಸಿಗಳು ಒಟ್ಟು 4.4 ಕೋಟಿ ರೂ ಹಣ ಹೊಂದಿವೆ.
ಈ ಸಲದ ಹರಾಜು ಪ್ರಕ್ರಿಯೆಯಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ನ ಯುವ ಪ್ರತಿಭೆ ಭಾಗಿಯಾಗಲಿದ್ದು, ತಮ್ಮ ಪ್ರದರ್ಶನ ಹೊರಹಾಕಲು ಉತ್ತಮ ವೇದಿಕೆಯಾಗಲಿದೆ. ಪಿಕೆಎಲ್ ಲೀಗ್ ನೀತಿ ಪ್ರಕಾರ ಪ್ರತಿ ಫ್ರಾಂಚೈಸಿ 8 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಬಿಡುಗಡೆಯಾಗಿರುವ ಪ್ರಮುಖ ಆಟಗಾರರು:ಪವನ್ ಶೆರವಾತ್(ಬೆಂಗಳೂರು ಬುಲ್ಸ್), ಪ್ರದೀಪ್ ನರ್ವಾಲ್(ಯುಪಿ ಯೋಧಾ), ಅಭಿಷೇಕ್ ಸಿಂಗ್(ಯು ಮುಂಬಾ), ವಿಕಾಸ್(ಹರಿಯಾಣ ಸ್ಟೀಲರ್ಸ್) ದೀಪಕ್ ಹೂಡಾ(ಜೈಪುರ್ ಪಿಂಕ್ ಪ್ಯಾಂಥರ್ಸ್) ಸುರ್ಜಿತ್ ಸಿಂಗ್(ತಮಿಳ್ ತಲೈವಾಸ್), ಜೋಗಿಂದರ್ ನರ್ವಾಲ್(ದಬಾಂಗ್ ಡೆಲ್ಲಿ), ರೋಹಿತ್ ಕುಮಾರ್(ತೆಲುಗು ಟೈಟನ್ಸ್)