ಬೆಂಗಳೂರು:ಯು ಮುಂಬಾದ ಬಲಿಷ್ಠ ಡಿಫೆಂಡಿಂಗ್ ಬಲೆಗೆ ಬಿದ್ದ ಬೆಂಗಳೂರು ಬುಲ್ಸ್ 45-34 ಅಂತರದಲ್ಲಿ ಸೋಲು ಕಂಡು ನಿರಾಶೆಯನುಭವಿಸಿದೆ.
ಬುಧವಾರ ನಡೆದ ಪಂದ್ಯದಲ್ಲಿ ಮೊದಲಾರ್ಧದ ಆರಂಭದಲ್ಲಿ ಪವನ್ ಶೆರಾವತ್ ಅವರ ಭರ್ಜರಿ ರೈಡಿಂಗ್ ನೆರವಿನಿಂದ 12-11ರಲ್ಲಿ ಮುನ್ನಡೆ ಸಾಧಿಸಿಕೊಂಡಿತ್ತು. ಆದರೆ ರಾಹುಲ್ ಸೆತ್ಪಾಲ್ ಬುಲ್ಸ್ ರೈಡರ್ಗಳನ್ನು ಬೇಟಿಯಾಡಿ ಮುಂಬೈಗೆ ಅಲ್ಪ ಮುನ್ನಡೆ ತಂದುಕೊಟ್ಟರು.
ಆದರೂ ಒಂದು ಹಂತದಲ್ಲಿ 13-17ರ ಹಿನ್ನಡೆಯಲ್ಲಿದ್ದ ಬುಲ್ಸ್ ಮೊದಲಾರ್ಧ ಅಂತ್ಯದ ವೇಳೆಗೆ ಅದ್ಭುತವಾಗಿ ಕಮ್ಬ್ಯಾಕ್ ಮಾಡಿ ಹಿನ್ನಡೆಯ ಅಂತರವನ್ನು 20-22 ಕ್ಕೆ ನಿಯಂತ್ರಿಸಿಕೊಂಡಿತ್ತು. ಆದರೆ ದ್ವಿತೀಯಾರ್ಧದಲ್ಲಿ ಪವನ್ ಶೆರಾವತ್ರನ್ನು ಹೆಚ್ಚು ಸಮಯ ಹೊರಹಾಕುವಲ್ಲಿ ಮುಂಬೈ ಡಿಫೆಂಡರ್ಗಳು ಯಶಸ್ವಿಯಾದರು. ಇದರ ಜೊತೆಗೆ ಬೆಂಗಳೂರು ಡಿಫೆಂಡರ್ಗಳು ಎದುರಾಳಿ ರೈಡರ್ಗಳನ್ನ ಹಿಡಿಯುವ ಯತ್ನದಲ್ಲಿ ಸುಖಾ ಸುಮ್ಮನೆ ಅಂಕಗಳನ್ನು ಬಿಟ್ಟು ತಾವಾಗಿಯೇ ಒತ್ತಡವನ್ನು ಮೈಮೇಲೇಳೆದುಕೊಂಡರು. ಇತ್ತ ಪವನ್ ವೈಫಲ್ಯ, ಡಿಫೆಂಡರ್ಗಳ ಕಳಪೆ ಆಟದಿಂದ ದ್ವಿತೀಯಾರ್ಧದಲ್ಲಿ ಬುಲ್ಸ್ 2 ಬಾರಿ ಆಲೌಟ್ ಆಗಿ ಹೀನಾಯ ಸೋಲು ಕಂಡಿತು.