ಬೆಂಗಳೂರು:ಪ್ರೋ ಕಬಡ್ಡಿ ಲೀಗ್‌ನ ಮೊದಲ ಸುತ್ತಿನ ಕೊನೆಯ ಎರಡು ಪಂದ್ಯಗಳಲ್ಲಿ ಯು ಮುಂಬಾ ಮತ್ತು ಬೆಂಗಾಲ್ ವಾರಿಯರ್ಸ್ ತಂಡಗಳು ಜಯ ಗಳಿಸಿ ಅಂಕ ಪಟ್ಟಿಯಲ್ಲಿ ಮುನ್ನಡೆ ಸಾಧಿಸಿವೆ. ಇದರೊಂದಿಗೆ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿನ ಪಂದ್ಯಗಳಿಗೆ ತೆರೆ ಬಿದ್ದಿದೆ. ಶುಕ್ರವಾರದಿಂದ ಪುಣೆಯ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಎರಡನೇ ಸುತ್ತಿನ ಪಂದ್ಯಗಳು ನಡೆಯಲಿವೆ.
ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡವು ಗುಜರಾತ್ ಜೈಂಟ್ಸ್ ವಿರುದ್ಧ 37-29 ಅಂಕಗಳ ಅಂತರದಲ್ಲಿ ಜಯ ಗಳಿಸಿದರೆ, ಎರಡನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ವಿರುದ್ಧ 35-30 ಅಂಕಗಳಿಂದ ಗೆಲುವು ಸಾಧಿಸಿತು. ದಬಾಂಗ್ ಡೆಲ್ಲಿ ತಂಡ ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದು, ಬೆಂಗಾಲ್ ವಾರಿಯರ್ಸ್ ಪರ ನಾಯಕ ಮಣಿಂದರ್ ಸಿಂಗ್ ರೈಡಿಂಗ್‌ನಲ್ಲಿ ಸೂಪರ್ 10 ಸಾಧನೆ ಮಾಡಿದ್ದಾರೆ.
ಬೆಂಗಾಲ್ ವಾರಿಯರ್ಸ್ ತಂಡದ ಜಯಕ್ಕೆ ಪ್ರಮುಖ ಕಾರಣವಾದದ್ದು ಡಿಫೆನ್ಸ್ ವಿಭಾಗವಾಗಿತ್ತು. ವೈಭವ್ ಗಾರ್ಜೆ, ಗಿರೀಶ್ ಮಾರುತಿ ಹಾಗೂ ಶುಭಂ ಶಿಂದೆ ಟ್ಯಾಕಲ್‌ನಲ್ಲಿ 14 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ದ್ವಿತಿಯಾರ್ಧದಲ್ಲಿ ಬೆಂಗಾಲ್ ವಾರಿಯರ್ಸ್ ಟ್ಯಾಕಲ್‌ನಿಂದ 10 ಅಂಕ ದೋಚಿದ್ದು, ಇದೇ ಮೊದಲ ಬಾರಿಗೆ ರೈಡಿಂಗ್‌ಗಿಂತ ಟ್ಯಾಕಲ್‌ನಲ್ಲೇ ಅತಿ ಹೆಚ್ಚು ಅಂಕಗಳು ದಾಖಲಾಗಿದ್ದು ವಿಶೇಷವಾಗಿತ್ತು.
ನವೀನ್ ಎಕ್ಸ್ಪ್ರೆಸ್ ಆಟ ವ್ಯರ್ಥ:ದಬಾಂಗ್ ಡೆಲ್ಲಿ ತಂಡದ ನಾಯಕ ನವೀನ್ ಕುಮಾರ್ ಸೂಪರ್ 10 ಸಾಧನೆ ಮಾಡಿದರೂ ಈ ಬಾರಿ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಪ್ರಥಮಾರ್ಧದಲ್ಲಿ ಬೆಂಗಾಲ್ ವಾರಿಯರ್ಸ್ ತಂಡ ದಬಾಂಗ್ ಡೆಲ್ಲಿ ವಿರುದ್ಧ 15-13 ಅಂಕಗಳಿಂದ ಮುನ್ನಡೆ ಕಂಡಿತ್ತು. ರೈಡಿಂಗ್‌ಗಿಂತ ಟ್ಯಾಕಲ್‌ನಲ್ಲೇ ಇತ್ತಂಡಗಳು ಹೆಚ್ಚು ಅಂಕಗಳನ್ನು ದಾಖಲಿಸಿದವು.
ದಬಾಂಗ್ ಡೆಲ್ಲಿ ತಂಡದ ನಾಯಕ ನವೀನ್ ಕುಮಾರ್ ದಿಟ್ಟ ಹೋರಾಟ ನೀಡಿ ಉತ್ತಮ ಪೈಪೋಟಿ ನೀಡುವಲ್ಲಿ ಯಶಸ್ವಿಯಾದರು. ಸತತ ಜಯದಿಂದ ಮುನ್ನುಗ್ಗುತ್ತಿದ್ದ ದಬಾಂಗ್ ಡೆಲ್ಲಿ ಈ ಹಿಂದಿನ ಪಂದ್ಯದಲ್ಲೂ ಸೋಲನುಭವಿಸಿತ್ತು. ಬೆಂಗಾಲ್ ವಾರಿಯರ್ಸ್ ತಂಡದ ನಾಯಕ ರೈಡಿಂಗ್‌ನಲ್ಲಿ 6 ಅಂಕ ಕಬಳಿಸಿ ತಂಡಕ್ಕೆ ನೆರವಾದರು.