ಬೆಂಗಳೂರು:ಪ್ರಸಕ್ತ ಸಾಲಿನ ಪ್ರೊ ಕಬಡ್ಡಿ ಲೀಗ್ಗೋಸ್ಕರ ಈಗಾಗಲೇ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ಟೂರ್ನಿ ಆರಂಭಗೊಳ್ಳಲು ವೇಳಾಪಟ್ಟಿ ನಿಗದಿ ಮಾಡಲಾಗಿದೆ. 9ನೇ ಆವೃತ್ತಿ ಅಕ್ಟೋಬರ್ 7ರಿಂದ ಆರಂಭಗೊಳ್ಳಲಿದೆ. ಡಿಸೆಂಬರ್ ಮಧ್ಯದವರೆಗೂ ಟೂರ್ನಿ ನಡೆಯಲಿದೆ.
ಬೆಂಗಳೂರು, ಪುಣೆ ಹಾಗೂ ಹೈದರಾಬಾದ್ನಲ್ಲಿ ಲೀಗ್ ಹಂತದ ಎಲ್ಲ ಪಂದ್ಯಗಳು ನಡೆಯಲಿವೆ. ಈ ಸಲದ ಆವೃತ್ತಿಯಲ್ಲಿ ಪಂದ್ಯಗಳ ವೀಕ್ಷಣೆ ಮಾಡಲು ಪ್ರೇಕ್ಷಕರಿಗೆ ಅನುಮತಿಸಲಾಗಿದೆ. ಕೋವಿಡ್ನಿಂದಾಗಿ ಕಳೆದ ವರ್ಷ ಪ್ರೇಕ್ಷಕರಿಗೆ ಅವಕಾಶವಿರಲಿಲ್ಲ.
ಲೀಗ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಪಮ್ ಗೋಸ್ವಾಮಿ ಮಾತನಾಡಿ, ಪ್ರೊ ಕಬಡ್ಡಿ ಲೀಗ್ ಆಯೋಜನೆ ಮಾಡಲು ನಾವು ಉತ್ಸುಕರಾಗಿದ್ದೇವೆ. ಕಳೆದ ವರ್ಷದ ಟೂರ್ನಮೆಂಟ್ ಬಯೋ ಬಬಲ್ ಮೂಲಕ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಈ ಸಲ ಅಭಿಮಾನಿಗಳಿಗೆ ಅವಕಾಶ ನೀಡಲಾಗುವುದು. ಬೆಂಗಳೂರು, ಹೈದರಾಬಾದ್ ಹಾಗೂ ಪುಣೆಗಳಲ್ಲಿ ಟೂರ್ನಿ ನಡೆಸಲು ನಿರ್ಧರಿಸಿರುವ ಕಾರಣ ಪ್ರೇಕ್ಷಕರು ಆಟ ಕಣ್ತುಂಬಿಕೊಳ್ಳಬಹುದು ಎಂದರು.
ಇದನ್ನೂ ಓದಿ:2.26 ಕೋಟಿ ರೂ.ಗೆ ಪವನ್ ಶೆರಾವತ್ ಖರೀದಿಸಿದ ತಮಿಳ್ ತಲೈವಾಸ್: ಬೆಂಗಳೂರು ಬುಲ್ಸ್ ಕೋಚ್ ಕಣ್ಣೀರು!
ಕಳೆದ ಆಗಸ್ಟ್ 5 ಮತ್ತು 6ರಂದು ಹರಾಜು ಪ್ರಕ್ರಿಯೆ ನಡೆದಿತ್ತು. ಬುಲ್ಸ್ ತಂಡದ ಕ್ಯಾಪ್ಟನ್ ಪವನ್ ಶೆರಾವತ್ಗೆ 2.26 ಕೋಟಿ ರೂ. ನೀಡಿ ತಮಿಳ್ ತಲೈವಾಸ್ ಖರೀದಿಸಿದೆ. 1.70 ಕೋಟಿ ರೂಪಾಯಿ ನೀಡಿ ವಿಕಾಸ್ ಖಂಡೋಲಾಗೆ ಖರೀದಿ ಮಾಡುವಲ್ಲಿ ಬೆಂಗಳೂರು ತಂಡ ಯಶಸ್ವಿಯಾಗಿದೆ. ಪ್ರದೀಪ್ ನರ್ವಾಲ್ಗೆ 90 ಲಕ್ಷ ನೀಡಿ ಯುಪಿ ಯೋಧಾಸ್ ಉಳಿಸಿಕೊಂಡಿದೆ.