ಬೆಂಗಳೂರು:ರೋಚಕತೆ, ಕಠಿಣ ಸವಾಲುಗಳಿಂದ ಕೂಡಿದ್ದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ 38-36 ಅಂಕಗಳಿಂದ ಯು.ಪಿ. ಯೋಧಾಸ್ ತಂಡವನ್ನು ಸೋಲಿಸಿ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ತನ್ನ ಮೊದಲ ಜಯ ದಾಖಲಿಸಿತು. ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ವಿಕಾಸ್ ಕಂಡೋಲಾ ಮತ್ತು ಭರತ್ ಇಬ್ಬರೂ ತಲಾ 11 ಅಂಕಗಳನ್ನು ದಾಖಲಿಸಿದರು.
ಪಂದ್ಯದ ಆರಂಭಿಕ ನಾಲ್ಕು ನಿಮಿಷಗಳಲ್ಲಿ ಪರ್ದೀಪ್ ನರ್ವಾಲ್ ಸೂಪರ್ ರೈಡ್ ಮಾಡಿ ಯೋಧಾಸ್ ತಂಡಕ್ಕೆ 4-1ರ ಮುನ್ನಡೆ ತಂದುಕೊಟ್ಟರು. ಕೆಲವೇ ನಿಮಿಷಗಳಲ್ಲಿ ಬುಲ್ಸ್ ಆಲೌಟ್ ಆಗುವ ಭೀತಿ ಎದುರಿಸಿತು. ಆದರೆ ಮ್ಯಾಟ್ ನಲ್ಲಿ ಉಳಿದಿದ್ದ ಕೊನೆಯ ಆಟಗಾರ ವಿಕಾಸ್ ಕಂಡೋಲಾ ಸೂಪರ್ ರೈಡ್ ಮೂಲಕ 2 ಅಂಕ ತಂದರಲ್ಲದೆ ತಮ್ಮ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಹಸ ಮಾಡಿದರು.
ಸ್ವಲ್ಪ ಸಮಯದ ನಂತರ ಆಟದ ದಿಕ್ಕು ಬದಲಾಯಿತು. ಮೋನು ಯೋಧಾಸ್ ತಂಡದ ಪರ್ದೀಪ್ ನರ್ವಾಲ್ ಅವರನ್ನು ಔಟ್ ಮಾಡುವ ಮೂಲಕ ಯೋಧಾಸ್ ಪ್ರಾಬಲ್ಯಕ್ಕೆ ತಡೆಯೊಡ್ಡಿದರು. ಕೆಲವೇ ನಿಮಿಷಗಳಲ್ಲಿ ಯೋಧಾಸ್ ತಂಡವನ್ನ ಬುಲ್ಸ್ ಆಲ್ ಔಟ್ ಮಾಡುವ ವಿರಾಮದ ವೇಳೆಗೆ ಐದು ಅಂಕಗಳಿಂದ ಮುನ್ನಡೆ ಕಂಡುಕೊಂಡಿತು.
ದ್ವಿತೀಯಾರ್ಧದಲ್ಲಿ ಯೋಧಾಸ್ ನಿಧಾನವಾಗಿ ತಮ್ಮ ಲಯವನ್ನು ಮರಳಿ ಪಡೆಯಿತು. ಆದರೆ, ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಬುಲ್ಸ್ ದ್ವಿತೀಯಾರ್ಧದಲ್ಲಿ ಎರಡನೇ ಬಾರಿ ಸಹ ಎದುರಾಳಿಯನ್ನು ಕಟ್ಟಿಹಾಕಿ 29- 21ರಲ್ಲಿ ಮುನ್ನಡೆ ಸಾಧಿಸಿತು. ಹೂಡಾ ಅವರ ಸೂಪರ್ ರೈಡ್ ಬುಲ್ಸ್ ಪಾಳೆಯಕ್ಕೆ ಮತ್ತಷ್ಟು ಲೀಡ್ ನೀಡಿತು.