ಬೆಂಗಳೂರು:ಪ್ರೋ ಕಬಡ್ಡಿ ಲೀಗ್ನಲ್ಲಿ ಶನಿವಾರ ಯು ಮುಂಬಾ ವಿರುದ್ಧ ನಡೆದ ಪಂದ್ಯದಲ್ಲಿಮೊದಲಾರ್ಧದಲ್ಲಿ 11-24 ಅಂತರದ ಹಿನ್ನಡೆ ಹೊಂದಿದ್ದ ಬೆಂಗಳೂರು ಬುಲ್ಸ್ ದ್ವಿತಿಯಾರ್ಧದಲ್ಲಿ ಪುಟಿದೆದ್ದು 42-32 ಅಂತರದ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಬೆಂಗಳೂರು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಬುಲ್ಸ್ ಪರ ಭರತ್ ರೈಡಿಂಗ್‌ನಲ್ಲಿ 16 ಅಂಕ ಗಳಿಸಿ ಜಯದ ರೂವಾರಿ ಎನಿಸಿದರು. ಇನ್ನೊಂದೆಡೆ ವಿಕಾಶ್ ಕಂಡೋಲ 8 ಅಂಕ ಪಡೆದು ಅದ್ಭುತ ಜಯಕ್ಕೆ ನೆರವಾದರು. ದ್ವಿತಿಯಾರ್ಧದಲ್ಲಿ ಬೆಂಗಳೂರು 31 ಅಂಕ ದೋಚುವ ಮೂಲಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು.
ಯು ಮುಂಬಾ - ಬೆಂಗಳೂರು ಬುಲ್ಸ್ ಪಂದ್ಯ ದ್ವಿತಿಯಾರ್ಧದ ಆರಂಭದಲ್ಲೇ ಯು ಮುಂಬಾ ತಂಡವನ್ನು ಆಲೌಟ್ ಮಾಡಿದ ಬುಲ್ಸ್, 21 ಅಂಕಗಳೊಂದಿಗೆ ಸವಾಲು ಮುಂದುವರೆಸಿತು. ರೈಡಿಂಗ್‌ನಲ್ಲಿ ಭರತ್ 12 ಅಂಕ ಗಳಿಸಿ ಸೂಪರ್ ಟೆನ್ ಸಾಧನೆ ಮಾಡಿದರು. 11 ನಿಮಿಷಗಳ ಆಟ ಬಾಕಿ ಇರುವಾಗ ಬೆಂಗಳೂರು ಎರಡನೇ ಸಲ ಯು ಮುಂಬಾ ತಂಡವನ್ನು ಆಲೌಟ್ ಮಾಡಿ 29-27ರಲ್ಲಿ ಮುನ್ನಡೆ ಸಾಧಿಸಿತು.
10 ನಿಮಿಷಗಳ ಆಟದಲ್ಲಿ ಬೆಂಗಳೂರು ಬುಲ್ಸ್ 18 ಅಂಕ ಗಳಿಸಿ ತಕ್ಕ ತಿರುಗೇಟು ನೀಡಿತು. ಭರತ್ 16 ರೈಡಿಂಗ್ ಅಂಕ ಗಳಿಸುವುದರೊಂದಿಗೆ ಬೆಂಗಳೂರು ಬುಲ್ಸ್ 42-32 ಅಂತರದಲ್ಲಿ ಪಂದ್ಯ ಗೆದ್ದುಕೊಂಡಿತು. ಯು ಮುಂಬಾ ಪರ ಗುಮಾನ್ ಸಿಂಗ್ 11 ಅಂಕ ಪಡೆದರು.
ಯು ಮುಂಬಾ - ಬೆಂಗಳೂರು ಬುಲ್ಸ್ ಹಣಾಹಣಿ ಮೊದಲಾರ್ಧದಲ್ಲಿ ಯು ಮುಂಬಾ ಬೃಹತ್ ಮುನ್ನಡೆ:ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸಿ ಆತ್ಮವಿಶ್ವಾಸದಲ್ಲಿದ್ದ ಬೆಂಗಳೂರು ಬುಲ್ಸ್ ತಂಡ ಯು ಮುಂಬಾ ವಿರುದ್ಧ ಪ್ರಥಮಾರ್ಧದಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಯಿತು. ಯು ಮುಂಬಾ ಮೊದಲಾರ್ಧದಲ್ಲಿ 24-11 ಅಂತರದಲ್ಲಿ ಮುನ್ನಡೆ ಪಡೆದಿತ್ತು. ರೈಡಿಂಗ್‌ನಲ್ಲಿ ಗುಮಾನ್ ಸಿಂಗ್ 7 ಅಂಕ ಗಳಿಸಿ ತಂಡದ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು.
ಆರಂಭದಿಂದಲೂ ಯು ಮುಂಬಾ ತಂಡದ ಪ್ರತಿಯೊಬ್ಬ ಆಟಗಾರರೂ ಅಂಕ ಗಳಿಸಿರುವುದು ಪಂದ್ಯದ ವಿಶೇಷವಾಗಿತ್ತು. ಲೆಫ್ಟ್ ಕಾರ್ನರ್‌ನಲ್ಲಿ ಮೋಹಿತ್ ಹಾಗೂ ಸುರಿಂದರ್ ಸಿಂಗ್ ಒಟ್ಟು 4 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು. ರೈಟ್ ಕಾರ್ನರ್‌ನಲ್ಲಿ ರಾಹುಲ್ ಸತ್ಪಾಲ್ 3 ಅಂಕಗಳನ್ನು ಗಳಿಸಿ ಬೆಂಗಳೂರು ಬುಲ್ಸ್ ತಂಡವನ್ನು ನಿಯಂತ್ರಿಸುವಲ್ಲಿ ಸಫಲರಾದರು. ಬೆಂಗಳೂರು ಬುಲ್ಸ್ ರೈಡಿಂಗ್‌ನಲ್ಲಿ ಕೇವಲ 9 ಅಂಕಗಳನ್ನು ಗಳಿಸಿತು. ಎರಡು ಬಾರಿ ಆಲೌಟ್ ಆಗುವ ಮೂಲಕ ಬೃಹತ್ ಹಿನ್ನಡೆ ಹೊಂದಿತ್ತು. ಟ್ಯಾಕಲ್ ವಿಭಾಗದಲ್ಲಿ ಸಂಪೂರ್ಣ ವಿಫಲಗೊಂಡು ಕೇವಲ 2 ಅಂಕ ಗಳಿಸಿತ್ತು.
ಇದನ್ನೂ ಓದಿ:T20 World Cup: ಗ್ಲೆನ್ ಫಿಲಿಪ್ಸ್ರ ಫ್ಲೈಯಿಂಗ್ ಕ್ಯಾಚ್ಗೆ ಸ್ಟೊಯಿನೀಸ್ ಸ್ಟನ್