ಬೆಂಗಳೂರು: ಪ್ರೋ ಕಬಡ್ಡಿ ಲೀಗ್‌ನ ಎರಡನೇ ದಿನದ ಮೊದಲ ರೋಚಕ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಹಾಗೂ ಪುಣೇರಿ ಪಲ್ಟನ್ ತಂಡಗಳು 35-35 ಅಂಕಗಳಿಂದ ಸಮಬಲ ಸಾಧಿಸಿದವು. ಇದು ಈ ಋತುವಿನ ಮೊದಲ ಸಮಬಲ ಸಾಧಿಸಿದ ಪಂದ್ಯವಾಗಿದೆ. ಪ್ರಥಮಾರ್ಧದಲ್ಲಿ 23-16 ರಿಂದ ಮುನ್ನಡೆ ಕಂಡಿದ್ದ ಪುಣೇರಿ ಪಲ್ಟನ್ ದ್ವಿತೀಯಾರ್ಧದಲ್ಲಿ ಆ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು. ನಡುವೆ ಆಲೌಟ್ ಆದದ್ದು ತಂಡದ ಮನೋಬಲ ಕುಸಿಯಲು ಕಾರಣವಾಯಿತು. ಪಾಟ್ನಾ ಪೈರೇಟ್ಸ್ ಎದುರಾಳಿಗೆ ಏಳು ಬೋನಸ್ ಅಂಕಗಳನ್ನು ನೀಡಿದ್ದು ಜಯದಿಂದ ವಂಚಿತವಾಗಲು ಪ್ರಮುಖ ಕಾರಣವಾಯಿತು.
ಪಾಟ್ನಾ ಪೈರೇಟ್ಸ್ ಪರ ಸಚಿನ್ ರೈಡಿಂಗ್‌ನಲ್ಲಿ 7 ಅಂಕಗಳನ್ನು ಗಳಿಸಿದರೆ, ರೋಹಿತ್ ಗೂಲಿಯಾ 6 ಅಂಕಗಳನ್ನು ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ತ್ಯಾಗರಾಜನ್ ಹಾಗೂ ಸುನೀಲ್ ಸೇರಿ ಟ್ಯಾಕಲ್‌ನಲ್ಲಿ 6 ಅಂಕಗಳನ್ನು ಗಳಿಸಿದರು.
ಪುಣೇರಿ ಪಲ್ಟನ್ ಪರ ಅಸ್ಲಾಮ್ ಇನಾಮ್ದಾರ್ 7, ಮೋಹಿತ್ ಗೊಯತ್ 8 ಹಾಗೂ ಆಕಾಶ್ ಶಿಂಧೆ 6 ರೈಡಿಂಗ್ ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು. ಬಾದಲ್ ಸಿಂಗ್ ಮತ್ತು ಅಲಂಕಾರ್ ಪಾಟೀಲ್ ಟ್ಯಾಕಲ್‌ನಲ್ಲಿ ಒಟ್ಟು 5 ಅಂಕಗಳನ್ನು ಗಳಿಸಿದರು. ದ್ವಿತೀಯಾರ್ಧದ ಆರಂಭದಿಂದಲೇ ಪಾಟ್ನಾ ಪೈರೇಟ್ಸ್ ಆಕ್ರಮಣಕಾರಿ ಆಟ ಆರಂಭಿಸಿತು. ರೈಡಿಂಗ್‌ನಲ್ಲಿ ಸಚಿನ್ ಹಾಗೂ ವಿಶ್ವಾಸ ನಿರಂತರ ಯಶಸ್ಸು ಕಂಡರು. ಪರಿಣಾಮ ಪುಣೇರಿ ಪಲ್ಟನ್ ಆಲೌಟ್ ಆಯಿತು.
ಈ ಹಂತದಲ್ಲಿ ಪಾಟ್ನಾ ಪೈರೇಟ್ಸ್ 26-24 ಅಂತರದಲ್ಲಿ ಮುನ್ನಡೆ ಕಂಡಿತು. ಸಚಿನ್ ಹಾಗೂ ರೋಹಿರ್ ಗೂಲಿಯಾ ತಂಡದ ಮುನ್ನಡೆಗೆ ನೆರವಾದರು. ಆದರೆ, ಈ ಮುನ್ನಡೆ ಹೆಚ್ಚು ಕಾಲ ಉಳಿಯಲಿಲ್ಲ, ಉತ್ತಮ ರೈಡಿಂಗ್ ಮೂಲಕ ತಿರುಗೇಟು ನೀಡಿದ ಪುಣೇರಿ ಪಲ್ಟನ್ 30-30 ರಲ್ಲಿ ಸಮಬಲ ಸಾಧಿಸಿತು. ನಿರಂತರ ಬೋನಸ್ ಅಂಕಗಳನ್ನು ಗಳಿಸಿದ ಪುಣೇರಿ ಪಲ್ಟನ್ ಒಂದು ಪಂದ್ಯ ಮುಗಿಯಲು ನಾಲ್ಕು ನಿಮಿಷ ಬಾಕಿ ಇರುವಂತೆ 32-31 ರಲ್ಲಿ ಮೇಲುಗೈ ಸಾಧಿಸಿತು.