ಬೆಂಗಳೂರು: ವಿವೋ ಪ್ರೊ ಕಬಡ್ಡಿ ಲೀಗ್ ಸೀಸನ್ 8ರ ಗುರುವಾರದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ತಂಡ ಮತ್ತು ದಬಾಂಗ್ ಡೆಲ್ಲಿ ತಂಡಗಳ ನಡುವಿನ ರೋಚಕ ಪಂದ್ಯಾಟವು ಸಮಬಲದೊಂದಿಗೆ ಸಮಾಪ್ತಿಗೊಂಡಿದೆ. ಅಂತಿಮ ನಿಮಿಷದಲ್ಲಿ ನವೀನ್ ಕುಮಾರ್ ಸೂಪರ್ ರೇಡ್ ನಿಂದ 3 ಅಂಕ ಪಡೆದಾಗ ದಬಾಂಗ್ ಡೆಲ್ಲಿ ಪಂದ್ಯ ಗೆದ್ದಿದೆ ಎಂದು ಭಾವಿಸಿತು. ಆದರೆ, ಮಂಜಿತ್ ಚಿಲ್ಲರ್ ಅವರ ವಿಫಲ ಟ್ಯಾಕಲ್ ಬೆಂಗಾಲ್ ತಂಡಕ್ಕೆ ಪಂದ್ಯದಲ್ಲಿ ಉಳಿಸಲು ಮತ್ತು ಟೈ ಸಾಧಿಸಲು ಅವಕಾಶ ಮಾಡಿಕೊಟ್ಟಿತು.
ಬಂಗಾಳ ತಂಡದ ಪರ ಮಣಿಂದರ್ ಸಿಂಗ್ 16 ಅಂಕಗಳೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದರೆ, ದೆಹಲಿ ತಂಡದ ಪರ ನವೀನ್ ಕುಮಾರ್ 16 ಅಂಕ ಗಳಿಸಿದರು. ಪಂದ್ಯದ ಈ ಫಲಿತಾಂಶದಿಂದಾಗಿ ಬಂಗಾಳವು ಪ್ಲೇ ಆಫ್ ಸುತ್ತಿನ ಸ್ಪರ್ಧೆಯಲ್ಲಿ ಉಳಿಯುವುದು ಕಷ್ಟಸಾಧ್ಯವಾಗಿದೆ. ಲೀಗ್‌ನಲ್ಲಿ 2ನೇ ಅಗ್ರ ಸ್ಥಾನವನ್ನು ಪಡೆಯಲು ಬೇಕಿದ್ದ ಎಲ್ಲ 5 ಅಂಕಗಳನ್ನು ಪಡೆಯುವ ಅವಕಾಶವನ್ನು ಕೈಚೆಲ್ಲಿರುವ ದೆಹಲಿ ಕೂಡ ಸಂಕಷ್ಟಕ್ಕೆ ಸಿಲುಕಿದೆ.
ಮೊದಲಾರ್ಧದಲ್ಲಿ ಆರಂಭಿಕ ನಿಮಿಷಗಳಲ್ಲಿ ಬಂಗಾಲ ಪ್ರಾಬಲ್ಯ ಸಾಧಿಸಿತು. ನಾಯಕ ಮಣಿಂದರ್ ಸಿಂಗ್ ಸಮಯೋಚಿತ ಅಂಕಗಳನ್ನು ಪಡೆಯುವ ಮೂಲಕ ಹಾಲಿ ಚಾಂಪಿಯನ್‌ಗಳು ಸುಲಭಕ್ಕೆ ಮಣಿಯುವುದಿಲ್ಲ ಎಂದು ತೋರಿದರು. ಮಣಿಂದರ್ ಸಿಂಗ್ ನಾಲ್ಕನೇ ನಿಮಿಷದಲ್ಲಿ 2 ರೇಡ್ ಅಂಕಗಳನ್ನು ಪಡೆದರು.
4 ಅಂಕಗಳ ಮುನ್ನಡೆ ಸಾಧಿಸಿದ್ದ ಡೆಲ್ಲಿ ತಡೆಯಲು ವಾರಿಯರ್ಸ ಪ್ರಯತ್ನಿಸಿತ್ತಾದರೂ, ಡೆಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರೆಸಿತು. ವಿಜಯ್ ಮತ್ತು ನವೀನ್ ಕುಮಾರ್ ಅವರ ಉತ್ತಮ ದಾಳಿಯು ತಕ್ಷಣವೇ ಮಣಿಂದರ್ ಸಿಂಗ್ ಅವರನ್ನು ನಿಭಾಯಿಸಲು ಸಹಕಾರಿಯಾಯಿತು.