ನವದೆಹಲಿ:ಇಲ್ಲಿನ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕ್ರೀಡಾ ಸಾಧಕರಿಗೆ ನೀಡಲಾಗುವ 'ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ'ಗಳನ್ನು ಪ್ರದಾನ ಮಾಡಿದರು. ಭಾರತದ ಸ್ಟಾರ್ ಷಟ್ಲರ್‌ಗಳಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಅವರು 2023 ರ ಸಾಲಿನ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪಡೆದರೆ, ಮೊಹಮದ್ ಶಮಿ, ಪ್ಯಾರಾ ಆರ್ಚರಿಯಲ್ಲಿ ಉದಯಿಸಿದ ತಾರೆ ಶೀತಲ್ ದೇವಿ ಸೇರಿದಂತೆ 26 ಸಾಧಕರಿಗೆ ಅರ್ಜುನ ಪ್ರಶಸ್ತಿ ನೀಡಲಾಯಿತು.
ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ ಸಾಮಾನ್ಯವಾಗಿ ಆಗಸ್ಟ್ 29 ರಂದು ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಲಾಗುತ್ತಿತ್ತು. ಆದರೆ, ಕಳೆದ ವರ್ಷ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8 ರವರೆಗೆ ಹ್ಯಾಂಗ್‌ಝೌನಲ್ಲಿ ಏಷ್ಯನ್ ಗೇಮ್ಸ್ ಕಾರಣ ಪ್ರಶಸ್ತಿ ಸಮಾರಂಭವನ್ನು ಇಂದಿಗೆ ಮುಂದೂಡಲಾಗಿತ್ತು.
ವಿಶ್ವಕಪ್ ಸ್ಟಾರ್ ಶಮಿಗೆ ಅರ್ಜುನ ಪ್ರಶಸ್ತಿ:ಭಾರತದ ವೇಗಿ, ವಿಶ್ವಕಪ್ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಮೊಹಮ್ಮದ್ ಶಮಿ ಅವರಿಗೆ ಅರ್ಜುನ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಶ್ವಕಪ್ನಲ್ಲಿ ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ಗಳನ್ನು ಉದುರಿಸಿದ ಶಮಿ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಮಾಜಿ ವೇಗಿ ಜಹೀರ್ ಖಾನ್ ಅವರ ವಿಶ್ವಕಪ್ನಲ್ಲಿನ 44 ವಿಕೆಟ್‌ಗಳ ದಾಖಲೆಯನ್ನೂ ಮುರಿದರು. 18 ವಿಶ್ವಕಪ್ ಪಂದ್ಯಗಳಲ್ಲಿ ಶಮಿ 13.52 ರ ಸರಾಸರಿಯಲ್ಲಿ 55 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರ ವಿವರ ಹೀಗಿದೆ:
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ:ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ (ಬ್ಯಾಡ್ಮಿಂಟನ್).
ಅರ್ಜುನ ಪ್ರಶಸ್ತಿ ವಿಜೇತರು:ಓಜಸ್ ಪ್ರವೀಣ್ ಡಿಯೋಟಾಲೆ (ಆರ್ಚರಿ), ಅದಿತಿ ಗೋಪಿಚಂದ್ ಸ್ವಾಮಿ (ಆರ್ಚರಿ), ಮುರಳಿ ಶ್ರೀಶಂಕರ್ (ಅಥ್ಲೆಟಿಕ್ಸ್), ಪಾರುಲ್ ಚೌಧರಿ (ಅಥ್ಲೆಟಿಕ್ಸ್), ಮೊಹಮ್ಮದ್ ಹುಸಾಮುದ್ದೀನ್ (ಬಾಕ್ಸಿಂಗ್), ಆರ್ ವೈಶಾಲಿ (ಚೆಸ್), ಮೊಹಮ್ಮದ್ ಶಮಿ (ಕ್ರಿಕೆಟ್), ಅನುಷ್ ಅಗರ್ವಾಲ್ ( ಕುದುರೆ ಸವಾರಿ), ದಿವ್ಯಾಕೃತಿ ಸಿಂಗ್ (ಈಕ್ವೆಸ್ಟ್ರಿಯನ್ ಡ್ರೆಸ್ಸೇಜ್), ದೀಕ್ಷಾ ದಾಗರ್ (ಗಾಲ್ಫ್), ಕ್ರಿಶನ್ ಬಹದ್ದೂರ್ ಪಾಠಕ್ (ಹಾಕಿ), ಸುಶೀಲಾ ಚಾನು (ಹಾಕಿ), ಪವನ್ ಕುಮಾರ್ (ಕಬಡ್ಡಿ), ರಿತು ನೇಗಿ (ಕಬಡ್ಡಿ), ನಸ್ರೀನ್ (ಖೋ-ಖೋ), ಪಿಂಕಿ ( ಲಾನ್ಬೌಲ್), ಐಶ್ವರಿ ಪ್ರತಾಪ್ ಸಿಂಗ್ ತೋಮರ್ (ಶೂಟಿಂಗ್), ಇಶಾ ಸಿಂಗ್ (ಶೂಟಿಂಗ್), ಹರಿಂದರ್ ಪಾಲ್ ಸಿಂಗ್ ಸಂಧು (ಸ್ಕ್ವಾಷ್), ಐಹಿಕಾ ಮುಖರ್ಜಿ (ಟೇಬಲ್ ಟೆನ್ನಿಸ್), ಸುನಿಲ್ ಕುಮಾರ್ (ಕುಸ್ತಿ), ಆಂಟಿಮ್ ಪಂಘಲ್ (ಕುಸ್ತಿ), ನವೋರೆಮ್ ರೋಶಿಬಿನಾ ದೇವಿ (ವುಶು), ಶೀತಲ್ ದೇವಿ (ಪ್ಯಾರಾ ಆರ್ಚರಿ), ಇಲ್ಲೂರಿ ಅಜಯ್ ಕುಮಾರ್ ರೆಡ್ಡಿ (ಅಂಧ ಕ್ರಿಕೆಟ್), ಪ್ರಾಚಿ ಯಾದವ್ (ಪ್ಯಾರಾ ಕ್ಯಾನೋಯಿಂಗ್).
ದ್ರೋಣಾಚಾರ್ಯ ಪ್ರಶಸ್ತಿ (ಸಾಮಾನ್ಯ ವಿಭಾಗ):ಲಲಿತ್ ಕುಮಾರ್ (ಕುಸ್ತಿ), ಆರ್‌ಬಿ ರಮೇಶ್ (ಚೆಸ್), ಮಹಾವೀರ್ ಪ್ರಸಾದ್ ಸೈನಿ (ಪ್ಯಾರಾ ಅಥ್ಲೆಟಿಕ್ಸ್), ಶಿವೇಂದ್ರ ಸಿಂಗ್ (ಹಾಕಿ), ಗಣೇಶ್ ಪ್ರಭಾಕರ್ ದೇವುರುಖ್ಕರ್ (ಮಲ್ಲಕಂಬ)
ದ್ರೋಣಾಚಾರ್ಯ ಪ್ರಶಸ್ತಿ (ಜೀವಮಾನ ವಿಭಾಗ):ಜಸ್ಕಿರತ್ ಸಿಂಗ್ ಗ್ರೆವಾಲ್ (ಗಾಲ್ಫ್), ಭಾಸ್ಕರನ್ ಇ (ಕಬಡ್ಡಿ), ಜಯಂತ ಕುಮಾರ್ ಪುಶಿಲಾಲ್ (ಟೇಬಲ್ ಟೆನಿಸ್).
ಧ್ಯಾನ್ ಚಂದ್ ಜೀವಮಾನ ಪ್ರಶಸ್ತಿ:ಮಂಜುಷಾ ಕನ್ವರ್ (ಬ್ಯಾಡ್ಮಿಂಟನ್), ವಿನೀತ್ ಕುಮಾರ್ ಶರ್ಮಾ (ಹಾಕಿ), ಕವಿತಾ ಸೆಲ್ವರಾಜ್ (ಕಬಡ್ಡಿ).
ಮೌಲಾನಾ ಅಬುಲ್ ಕಲಾಂ ಆಜಾದ್ (MAKA) ಟ್ರೋಫಿ 2023:ಗುರು ನಾನಕ್ ದೇವ್ ವಿಶ್ವವಿದ್ಯಾಲಯ, ಅಮೃತಸರ (ಒಟ್ಟಾರೆ ವಿಜೇತ ವಿಶ್ವವಿದ್ಯಾಲಯ); ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ, ಪಂಜಾಬ್ (1ನೇ ರನ್ನರ್-ಅಪ್), ಕುರುಕ್ಷೇತ್ರ ವಿಶ್ವವಿದ್ಯಾಲಯ, ಕುರುಕ್ಷೇತ್ರ (2ನೇ ರನ್ನರ್ ಅಪ್).
ಇದನ್ನೂ ಓದಿ:ಉಡುಪಿ ಸೇರಿದಂತೆ ನಮ್ಮಲ್ಲೂ ಅದ್ಭುತ ಬೀಚ್‌ಗಳಿವೆ: ಮಾಲ್ಡೀವ್ಸ್‌ಗೆ ಕ್ರಿಕೆಟಿಗರ ಟಾಂಗ್