ಕೌಲಾಲಂಪುರ (ಮಲೇಷ್ಯಾ):ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಭಾರತದ ಹೆಚ್‌ಎಸ್ ಪ್ರಣಯ್ ಚೀನಾದ ವೆಂಗ್ ಹಾಂಗ್ ಯಾಂಗ್ ಅವರನ್ನು 45 ನಿಮಿಷಗಳ ಸುದೀರ್ಘ ಆಟದಲ್ಲಿ ಸೋಲಿಸಿ, ಆರು ವರ್ಷಗಳ ಕಾಲದ ಪ್ರಶಸ್ತಿ ಬರವನ್ನು ನೀಗಿಸಿದ್ದಾರೆ. 2022ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಚೀನಾದ ವಿಶ್ವದ 34 ನೇ ಶ್ರೇಯಾಂಕಿತ ವೆಂಗ್ ಹಾಂಗ್ ಯಾಂಗ್ ವಿರುದ್ಧ 21-19 13-21 21-18ರಿಂದ ಪ್ರಣಯ್ ಗೆಲುವು ಸಾಧಿಸಿದರು.
ಪ್ರಣಯ್ ಅವರ ಮೊದಲ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ವರ್ಲ್ಡ್ ಟೂರ್ ಪ್ರಶಸ್ತಿಯಾಗಿದೆ. ಭಾರತಕ್ಕೆ ಈ ವರ್ಷ ಬ್ಯಾಡ್ಮಿಂಟನ್ನ ಸಿಂಗಲ್ಸ್ನಲ್ಲಿ ಸಿಕ್ಕ ಮೊದಲ ಪ್ರಶಸ್ತಿಯೂ ಇದಾಗಿದೆ. ಕಳೆದ ವರ್ಷ ಥಾಮಸ್ ಕಪ್ ಗೆಲುವಿನಲ್ಲಿ ಪ್ರಣಯ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, 2017ರ ಯುಎಸ್ ಓಪನ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ನಂತರ ವೈಯಕ್ತಿಕ ಪ್ರಶಸ್ತಿಯನ್ನು ಪ್ರಣಯ್ ಗೆದ್ದಿರಲಿಲ್ಲ. ಕಳೆದ ವರ್ಷ ಸ್ವಿಸ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದಾಗ ಮತ್ತು ಮಲೇಷ್ಯಾ ಮತ್ತು ಇಂಡೋನೇಷ್ಯಾ ಸೂಪರ್ 1000ರಲ್ಲಿ ಸೆಮಿಫೈನಲ್ ಹಂತದಲ್ಲಿ ಎಡವಿದ್ದರು. ಇದರಿಂದ ಅವರು ಸುಮಾರು ನಾಲ್ಕು ವರ್ಷ ಪ್ರಶಸ್ತಿ ಬರವನ್ನು ಎದುರಿಸಿದ್ದರು.
ಪ್ರಣಯ್ 2021ರ ಕೊನೆಯವರೆಗೂ ಗಾಯ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದರು. ನಂತರ ಕಮ್ ಬ್ಯಾಕ್ ಮಾಡಿದ ಪ್ರಣಯ್ ಭಾರತಕ್ಕಾಗಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದರು. ಇಂದು ನಡೆದ ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಟೂರ್ನಿಯ ಫೈನಲ್‌ನಲ್ಲಿ ಸಕಲ ಪ್ರಯತ್ನಗಳ ಫಲವಾಗಿ ಯಶಸ್ಸು ಸಾಧಿಸಿದ್ದಾರೆ. ಈ ವಾರ ಅವರು ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು. ವಿಶ್ವದ ಐದನೇ ಶ್ರೇಯಾಂಕದ ಚೌ ಟಿಯೆನ್ ಚೆನ್, ಆಲ್ ಇಂಗ್ಲೆಂಡ್ ಚಾಂಪಿಯನ್ ಲಿ ಶಿ ಫೆಂಗ್ ಮತ್ತು ಜಪಾನ್‌ನ ಕೆಂಟಾ ನಿಶಿಮೊಟೊ ಅವರನ್ನು ಸೋಲಿಸಿದ್ದರು. ಇಂಡೋನೇಷ್ಯಾದ ಕ್ರಿಶ್ಚಿಯನ್ ಆದಿನಾಟಾ ಸೆಮಿಫೈನಲ್‌ನಲ್ಲಿ ಗಾಯಗೊಂಡು ಕಾರಣ ಪ್ರಣಯ್ ಅವರನ್ನು ಮಣಿಸದೇ ಫೈನಲ್‌ಗೆ ಪ್ರವೇಶಿಸಿದರು.