ವಾರ್ಸಾ(ಪೋಲೆಂಡ್) :ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಖಂಡಿಸಿರುವ ಪೋಲೆಂಡ್ ಫುಟ್ಬಾಲ್ ಅಸೋಸಿಯೇಷನ್ ಮುಂದಿನ ತಿಂಗಳು ರಷ್ಯಾ ತಂಡದ ವಿರುದ್ದ ನಡೆಯಬೇಕಿರುವ ವಿಶ್ವಕಪ್ ಪ್ಲೇ ಆಫ್ನಲ್ಲಿ ಆಡದಿರಲು ನಿರ್ಧರಿಸಿದೆ.
ಪೋಲೆಂಡ್ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಸೆಜಾರಿ ಕುಲೇಶಾ ಶನಿವಾರ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ತಂಡದ ಸ್ಟಾರ್ ಫಾರ್ವಡ್ ಆಟಗಾರ ರಾಬರ್ಟ್ ಲೆವಾಂಡೊವಿಸ್ಕಿ ಸೇರಿದಂತೆ ಹಲವಾರು ಆಟಗಾರರು ಬೆಂಬಲ ಸೂಚಿಸಿದ್ದಾರೆ.
ಮಾತನಾಡುವುದಲ್ಲ, ಇದು ಕೆಲಸ ಮಾಡುವ ಸಮಯ! ಉಕ್ರೇನ್ ಮೇಲೆ ರಷ್ಯಾ ಒಕ್ಕೂಟದ ಆಕ್ರಮಣಶೀಲತೆಯ ಉಲ್ಬಣದಿಂದಾಗಿ ಪೊಲೀಸ್ ರಾಷ್ಟ್ರೀಯ ತಂಡವು ರಷ್ಯಾ ವಿರುದ್ಧ ಪ್ಲೇ-ಆಫ್ ಪಂದ್ಯವನ್ನು ಆಡಲು ಬಯಸುವುದಿಲ್ಲ. ಇದು ಒಂದೇ ಸರಿಯಾದ ನಿರ್ಧಾರ.
ಫಿಫಾಗೆ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡುವುದಕ್ಕೆ ನಾವು ಸ್ವೀಡಿಷ್ ಮತ್ತು ಜೆಕ್ ಅಸೋಸಿಯೇಷನ್‌ನೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಕುಲೇಶಾ ಟ್ವೀಟ್ ಮಾಡಿದ್ದಾರೆ.
"ಇದಕ್ಕೆ ಬೆಂಬಲ ಸೂಚಿಸಿರುವ ಸ್ಟಾರ್ ಫಾರ್ವರ್ಡರ್ ರಾಬರ್ಟ್, ಇದು ಸರಿಯಾದ ನಿರ್ಧಾರ!, ಉಕ್ರೇನ್ ವಿರುದ್ಧ ರಷ್ಯಾ ತನ್ನ ಆಕ್ರಮಣವನ್ನು ಮುಂದುವರಿಸುತ್ತಿರುವ ಈ ಸಂದರ್ಭದಲ್ಲಿ ನಾವು ಆ ತಂಡದ ಜೊತೆಗೆ ಆಡುವುದನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ.
ರಷ್ಯಾದ ಫುಟ್ಬಾಲಿಗರು ಅಥವಾ ಅಲ್ಲಿನ ಅಭಿಮಾನಿಗಳು ಇದಕ್ಕೆ ಕಾರಣರಲ್ಲ. ಆದರೆ, ಅಲ್ಲಿ(ಉಕ್ರೇನ್) ಏನೂ ಆಗುತ್ತಿಲ್ಲ ಎಂದು ನಟಿಸಲು ಸಾಧ್ಯವಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ರಷ್ಯಾ-ಉಕ್ರೇನ್ ಯುದ್ಧದ ಸುದ್ದಿ ನೋಡುವುದು ಅಷ್ಟು ಸುಲಭವಲ್ಲ - ನಂ.1 ಟೆನಿಸ್ ಆಟಗಾರನ ಮಾತು