ಬ್ಯಾಂಕಾಕ್:2022ರ ಥಾಮಸ್ ಕಪ್ನ್ನು ಮೊದಲ ಬಾರಿಗೆ ಗೆದ್ದ ಭಾರತದ ಪುರುಷರ ಬ್ಯಾಡ್ಮಿಂಟನ್ ತಂಡವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಫೋನ್ ಕರೆ ಮೂಲಕ ಮಾತನಾಡಿ ಅಭಿನಂದಿಸಿದ್ದಾರೆ. ಬ್ಯಾಂಕಾಕ್‌ನಲ್ಲಿ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು 3-0 ಅಂತರದಿಂದ ಮಣಿಸಿದ ಟೀಮ್ ಇಂಡಿಯಾ ಚೊಚ್ಚಲ ಚಿನ್ನದ ಪದಕಕ್ಕೆ ಮುತ್ತಿಕ್ಕುವ ಮೂಲಕ ಇತಿಹಾಸ ಸೃಷ್ಟಿಸಿದೆ.
ಭಾರತ ತಂಡವು ಇಂಡೋನೇಷ್ಯಾವನ್ನು 3-0 ಅಂತರದಿಂದ ಸೋಲಿಸಿದ ನಂತರ, ಪ್ರಧಾನಿ ಮೋದಿ ಅವರು ಆಟಗಾರರೊಂದಿಗೆ ವೈಯಕ್ತಿಕವಾಗಿ ಫೋನ್ ಕರೆಯಲ್ಲಿ ಮಾತನಾಡಿದರು. ಐತಿಹಾಸಿಕ ವಿಜಯದ ಹಿಂದಿನ ಆಟಗಾರರ ಶ್ರಮವನ್ನು ಪ್ರಧಾನಿ ಶ್ಲಾಘಿಸಿದರು. ಥಾಮಸ್ ಕಪ್ ಗೆದ್ದು 135 ಕೋಟಿ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ ನಮ್ಮ ಬ್ಯಾಡ್ಮಿಂಟನ್ ಚಾಂಪಿಯನ್‌ಗಳೊಂದಿಗೆ ವಿಶೇಷ ಸಂವಾದ ಎಂದು ಮೋದಿ ವಿಡಿಯೋದೊಂದಿಗೆ ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮುನ್ನ ತಂಡ ಗೆಲ್ಲುತ್ತಿದ್ದಂತೆ ಮೋದಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದರು.
ಅಂತಿಮ ಪಂದ್ಯದಲ್ಲಿ ಕಿಡಂಬಿ ಶ್ರೀಕಾಂತ್ ಅವರು, ಜೊನಾಟನ್ ಕ್ರಿಸ್ಟಿ ವಿರುದ್ಧ 21-15, 23-21 ನೇರ ಸೆಟ್ಗಳಿಂದ ಸೋಲಿಸುತ್ತಿದ್ದಂತೆ ಭಾರತವು ಚೊಚ್ಚಲ ಐತಿಹಾಸಿಕ ಸಾಧನೆಗೆ ಪಾತ್ರವಾಯಿತು. ಇದಕ್ಕೂ ಮುನ್ನ ಲಕ್ಷ್ಯ ಸೇನ್ ಅವರು ಒಲಿಂಪಿಕ್ ಪದಕ ವಿಜೇತ ಆ್ಯಂಟನಿ ಗಿಂಟಿಂಗ್ ಅವರನ್ನು 8-21, 21-17, 21-16 ಸೆಟ್ಗಳ ಅಂತರದಿಂದ ಮಣಿಸಿದರೆ, ಸಾತ್ವಿಕ್-ಚಿರಾಗ್ ಡಬಲ್ಸ್ ಜೋಡಿಯು ಮೊಹಮ್ಮದ್ ಅಹ್ಸಾನ್ ಮತ್ತು ಕೆವಿನ್ ಸಂಜಯ ಸುಕಮುಲ್ಜೊ ವಿರುದ್ಧ 18-21, 23-21, 21-19 ಅಂತರದ ಗೆಲುವಿನ ನಗೆ ಬೀರಿತ್ತು. ಈ ಸಾಧನೆಯು ಇತಿಹಾಸದಲ್ಲಿ ದೀರ್ಘಕಾಲ ಉಳಿಯಲಿದೆ.
ಒಂದು ಕೋಟಿ ರೂ. ಬಹುಮಾನ:ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡಕ್ಕೆ ಕ್ರೀಡಾ ಸಚಿವಾಲಯವು ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭಾನುವಾರ 1 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ. ಬ್ಯಾಡ್ಮಿಂಟನ್ ಸಾಧಕರಿಗೆ ದೇಶಾದ್ಯಂತ ಅಭಿನಂದನೆ ವ್ಯಕ್ತವಾಗಿದ್ದು, ಹಲವು ಕ್ರೀಡಾ ದಿಗ್ಗಜರು, ಪ್ರಮುಖ ರಾಜಕೀಯ ಮುಖಂಡರು ಸೇರಿದಂತೆ ಹಲವರು ಟ್ವೀಟ್ ಮೂಲಕ ಶ್ಲಾಘಿಸಿದ್ದಾರೆ.
ಇದನ್ನೂ ಓದಿ:ಥಾಮಸ್ ಕಪ್: ಇಂಡೋನೇಷ್ಯಾ ಮಣಿಸಿ ಇತಿಹಾಸ ಬರೆದ ಭಾರತದ ಬ್ಯಾಡ್ಮಿಂಟನ್ ತಂಡ