ನವದೆಹಲಿ:ಮಲೇಷ್ಯಾವನ್ನು ಬಗ್ಗುಬಡಿದು 4ನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಂಡ ಭಾರತ ಪುರುಷರ ಹಾಕಿ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಕ್ರೀಡಾ ಗಣ್ಯರು ಹಾಡಿ ಹೊಗಳಿದ್ದಾರೆ. ಮುಂಬರುವ ಏಷ್ಯನ್ ಗೇಮ್ಸ್ನಲ್ಲೂ ತಂಡ ಪದಕ ಗೆಲ್ಲಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ನಿನ್ನೆ ರಾತ್ರಿ ನಡೆದ ರೋಚಕ ಫೈನಲ್ ಹಣಾಹಣಿಯಲ್ಲಿ ಇನ್ನೇನು ತಂಡ ಸೋತಿತು ಎಂಬ ನಿರಾಸೆಯಲ್ಲಿದ್ದ ದೇಶಕ್ಕೆ ಆಟಗಾರರು ಅಚ್ಚರಿಯ ಗೆಲುವು ತಂದುಕೊಟ್ಟು ಸಂಭ್ರಮದ ಅಲೆ ಎಬ್ಬಿಸಿದರು. ಕೊನೆಯಲ್ಲಿ ಭಾರತ ಹಾಕಿ ತಂಡ ಮಲೇಷ್ಯಾ ವಿರುದ್ಧ 4-3 ಗೋಲುಗಳಿಂದ ಜಯ ದಾಖಲಿಸಿತು.
ಕಠಿಣ ಶ್ರಮ, ದೃಢಸಂಕಲ್ಪಕ್ಕೆ ಜಯ:ಹಾಕಿ ಇಂಡಿಯಾದ ಗೆಲುವಿಗೆ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇದು ಕಠಿಣ ಶ್ರಮ ಮತ್ತು ದೃಢಸಂಕಲ್ಪಕ್ಕೆ ಸಂದ ಜಯ ಎಂದು ಹೊಗಳಿದ್ದಾರೆ.
'ಏಷ್ಯನ್ ಚಾಂಪಿಯನ್‌ಶಿಪ್ ಅದ್ಭುತ ವಿಜಯಕ್ಕಾಗಿ ಪುರುಷರ ಹಾಕಿ ತಂಡಕ್ಕೆ ಅಭಿನಂದನೆಗಳು. ಇದು ತಂಡಕ್ಕೆ ಸಂದ 4 ನೇ ಟ್ರೋಫಿಯಾಗಿದೆ. ದಣಿವರಿಯದ ಹೋರಾಟ, ಕಠಿಣ ತರಬೇತಿ ಮತ್ತು ದೃಢಸಂಕಲ್ಪದಿಂದಾಗಿ ಈ ಗೆಲುವು ದಕ್ಕಿದೆ. ತಂಡದ ಅಸಾಧಾರಣ ಪ್ರದರ್ಶನವು ರಾಷ್ಟ್ರಕ್ಕೆ ಅಪಾರ ಹೆಮ್ಮೆಯನ್ನು ತಂದಿದೆ. ಹಾಕಿ ಟೀಂ ಇಂಡಿಯಾದ ಭವಿಷ್ಯದ ಸವಾಲುಗಳಿಗೆ ಒಳ್ಳೆಯದಾಗಲಿ' ಎಂದು ಹರಸಿ ಟ್ವೀಟ್ ಮಾಡಿದ್ದಾರೆ.
ಏಷ್ಯನ್ ಗೇಮ್ಸ್ ಪದಕ ಗೆಲ್ಲಲಿದೆ:ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಹಾಕಿ ಇಂಡಿಯಾದ ಸಾಧನೆಯನ್ನು ಹೊಗಳಿದ್ದು, ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡ ಅತ್ಯುನ್ನತ ಪ್ರಶಸ್ತಿಯನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಡಿಸಿದರು.
ಪಂದ್ಯ ವೀಕ್ಷಿಸಿ ಪ್ರಶಸ್ತಿ ವಿತರಣೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅನುರಾಗ್ ಠಾಕೂರ್, ಇದು ಆರಂಭವಷ್ಟೇ, ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಲಿದೆ. ಎಲ್ಲ ಆಟಗಾರರಿಗೆ ಅಭಿನಂದನೆಗಳು ಎಂದು ಹೇಳಿದರು.
"ಎಂಥಾ ಫೈನಲ್, ನಾನು ಪಂದ್ಯದ ಮೊದಲು ಹೇಳಿದಂತೆ ಅತ್ಯುತ್ತಮ ತಂಡವು ಗೆಲ್ಲಲಿ. ನಮಗೆ ರೋಚಕ ಫೈನಲ್ ಹಣಾಹಣಿ ಅವಕಾಶ ಸಿಗಲಿ ಎಂದಿದ್ದೆ. ಅದರಂತೆ ರೋಮಾಂಚಕ ಫೈನಲ್ ಅನ್ನು ವೀಕ್ಷಿಸಿದೆವು. ಅತ್ಯುತ್ತಮ ತಂಡವೊಂದು ಗೆದ್ದಿದೆ. ಇದು ಪ್ರಾರಂಭವಷ್ಟೇ, ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿ ಹಾಕಿ ತಂಡ ಉತ್ತಮ ಪ್ರದರ್ಶನ ನೀಡಿ ಪದಕ ಗೆಲ್ಲಲಿವೆ ಎಂದು ಅನುರಾಗ್ ಠಾಕೂರ್ ಹೇಳಿದರು. ಈ ಬಗ್ಗೆ ಸಚಿವರು ಟ್ವೀಟ್ ಕೂಡ ಮಾಡಿದ್ದಾರೆ.
ಪಾಕ್ ದಾಖಲೆ ಉಡೀಸ್:ಇತ್ತ ಭಾರತ 4ನೇ ಬಾರಿಗೆ ಏಷ್ಯಾ ಚಾಂಪಿಯನ್ ಟ್ರೋಫಿಯನ್ನು ಗೆಲ್ಲುವ ಮೂಲಕ ಪಾಕಿಸ್ತಾನ ತಂಡದ ದಾಖಲೆಯನ್ನು ಅಳಿಸಿ ಹಾಕಿತು. ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ಮೂರು ಬಾರಿ ಚಾಂಪಿಯನ್ ಆಗಿತ್ತು. ಇದೀಗ ಹಾಕಿ ಇಂಡಿಯಾ 4 ನೇ ಸಲ ಪ್ರಶಸ್ತಿ ಗೆದ್ದು ಏಷ್ಯಾ ಹಾಕಿಗೆ ತಾನೇ ಬಾಸ್ ಎಂಬುದನ್ನು ಸಾಬೀತುಪಡಿಸಿತು.
ಇದನ್ನೂ ಓದಿ:Asian Champions Trophy: ಭಲೇ ಭಾರತ.. 4-3 ಗೋಲುಗಳಿಂದ ಮಲೇಷ್ಯಾ ಮಣಿಸಿದ ಇಂಡಿಯಾ.. ನಾಲ್ಕನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆಲುವು