ಹೈದರಾಬಾದ್: 2016ರ ರಿಯೋ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವುದಕ್ಕೆ ಮೂರು ತಿಂಗಳ ತರೆಬೇತಿ ಕಾರಣವಾಗಿತ್ತೆಂದು ತಿಳಿಸಿರುವ ಸ್ಟಾರ್ ಕುಸ್ತಿಪಟು ಸಾಕ್ಷಿ ಮಲಿಕ್ ತಮ್ಮ ಯಶಸ್ಸಿನ ಶ್ರೇಯವನ್ನು ತರಬೇತಿ ಶಿಬಿರಕ್ಕೆ ನೀಡಿದ್ದಾರೆ.
"ರಿಯೋ ಒಲಿಂಪಿಕ್ಸ್ ಮುಂಚಿತವಾಗಿ ವಿದೇಶಗಳಲ್ಲಿ ನಾವು ತರಬೇತಿ ಶಿಬಿರಗಳಲ್ಲಿ ಭಾಗವಹಿಸಿದ್ದೆವು. ಅಲ್ಲಿ ವಿವಿಧ ದೇಶಗಳ ಕುಸ್ತಿಪಟುಗಳ ಜೊತೆ ತರಬೇತಿ ಪಡೆಯಲು ಅವಕಾಶವಿರುತ್ತದೆ. ಆ ವೇಳೆ, ವಿಶ್ವಚಾಂಪಿಯನ್ಶಿಪ್ ಹಾಗೂ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದಿದ್ದ ಕುಸ್ತಿಪಟುಗಳ ವಿರುದ್ಧ ನಾನು ಹಲವು ಪಂದ್ಯಗಳನ್ನು ಆಡಿದ್ದೆ " ಎಂದು ಭಾರತೀಯ ಶೆಟ್ಲರ್ ಪಿವಿ ಸಿಂಧು ನಡೆಸಿಕೊಟ್ಟ ದಿ ಎ -ಗೇಮ್ ಕಾರ್ಯಕ್ರಮದಲ್ಲಿ ಸಾಕ್ಷಿ ಮಲಿಕ್ ಹೇಳಿದ್ದಾರೆ.
"ನಾನು ಆ ಶಿಬಿರದಲ್ಲಿ ಸಾಕಷ್ಟು ತಂತ್ರಗಾರಿಕೆಗಳನ್ನು ಕಲಿತಿದ್ದೇನೆ ಮತ್ತು ಸಾಕಷ್ಟು ಅನುಭವವ ಪಡೆದಿದ್ದೆ. ವಿದೇಶದಲ್ಲಿ ಮೂರು ತಿಂಗಳ ತರಬೇತಿ ಅವಧಿ ನನಗೆ ಬಹಳ ಮುಖ್ಯವಾಗಿತ್ತು. ಆ ಶಿಬಿರ ನನಗೆ ಸಾಕಷ್ಟು ಮಾನ್ಯತೆ ನೀಡಿತು, ಮತ್ತು ಅದರಿಂದ ಒಲಿಂಪಿಕ್ನಲ್ಲಿ ಪದಕ ಗೆಲ್ಲಲು ಅಪಾರ ನೆರವಾಯಿತು" ಎಂದು 2016ರ ರಿಯೋ ಒಲಿಂಪಿಕ್ಸ್ನ ಕಂಚು ಪದಕ ವಿಜೇತೆ ಹೇಳಿದ್ದಾರೆ.
ಪದಕ ನಿರ್ಣಯಿಸುವ ಪಂದ್ಯದಲ್ಲಿ ಸಾಕ್ಷಿ ಒಂದು ಹಂತದಲ್ಲಿ 0-5 ಅಂಕಗಳಿಂದ ಹಿನ್ನಡೆಯನುಭವಿಸಿದ್ದರು. ಆದರೆ, ತಿರುಗಿ ಬಿದ್ದು ಕಿರ್ಗಿಸ್ತಾನ್ ಐಸುಲು ಟಿನಿಬೆಕೋವ್ ವಿರುದ್ಧ 8-5 ರಲ್ಲಿ ಗೆದ್ದು ಕಂಚಿನ ಪದಕ ಪಡೆದಿದ್ದರು. ಅದೇ ಒಲಿಂಪಿಕ್ಸ್ನಲ್ಲಿ ಪಿವಿ ಸಿಂಧು ಬ್ಯಾಡ್ಮಿಂಟನ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.