ಮುಂಬೈ:ಡಿಸೆಂಬರ್ 21ರಿಂದ ಬೆಂಗಳೂರಿನಲ್ಲಿ ಪ್ರೋ ಕಬಡ್ಡಿ ಲೀಗ್ (ಪಿಕೆಎಲ್) ಸೀಸನ್-8 ಆರಂಭವಾಗುತ್ತಿದೆ. ಕೋವಿಡ್ ಕಾರಣದಿಂದಾಗಿ ವೀಕ್ಷಕರಿಗೆ ಅವಕಾಶವಿರುವುದಿಲ್ಲ ಎಂದು ಕ್ರೀಡಾಕೂಟದ ಆಯೋಜಕರಾದ ಮಾರ್ಷಲ್ ಸ್ಪೋರ್ಟ್ಸ್ ಸಂಸ್ಥೆ ತಿಳಿಸಿದೆ.
ಕೋವಿಡ್ ಹಿನ್ನೆಲೆಯಲ್ಲಿ ಆಟಗಾರರು ಹಾಗೂ ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ವೀಕ್ಷಕರಿಗೆ ಸ್ಟೇಡಿಯಂನೊಳಗೆ ಪ್ರವೇಶವಿರುವುದಿಲ್ಲ. ಜೊತೆಗೆ, ಬೆಂಗಳೂರು ಒಂದೇ ಕಡೆಯಲ್ಲಿ ಎಲ್ಲಾ ಪಂದ್ಯಗಳನ್ನು ನಡೆಸಲು ತೀರ್ಮಾನಿಸಲಾಗಿದೆ.
ಮಾರ್ಷಲ್ ಸ್ಪೋರ್ಟ್ಸ್ ಸಿಇಒ ಅನುಪಮ್ ಗೋಸ್ವಾಮಿ ಪ್ರತಿಕ್ರಿಯಿಸಿ, 'ಉತ್ತಮ ಸುರಕ್ಷಾ ಕ್ರಮಗಳೊಂದಿಗೆ ದೊಡ್ಡ ಕ್ರೀಡಾಕೂಟಗಳನ್ನು ನಡೆಸಲು ಬೆಂಗಳೂರಿನಲ್ಲಿ ಎಲ್ಲಾ ಸೌಲಭ್ಯಗಳಿವೆ. ಹೀಗಾಗಿ, ಪಿಕೆಎಲ್ ಸೀಸನ್ 8 ಇಲ್ಲಿಯೇ ನಡೆಸಲು ತೀರ್ಮಾನಿಸಿದ್ದೇವೆ' ಎಂದಿದ್ದಾರೆ.