ಬೆಂಗಳೂರು: ಪ್ರೋ ಕಬಡ್ಡಿ 8ನೇ ಆವೃತ್ತಿಯಲ್ಲಿ ಹಲವು ಏರಿಳಿತಗಳ ನಡುವೆಯೂ ಯೋಧಾ ಪ್ಲೇ ಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಪ್ಲೇ ಆಫ್ ಪ್ರವೇಶಿಸಲು ಎರಡೂ ತಂಡಗಳಿಗೂ ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ ಯುಪಿ ತಂಡ 35-28ರ ಅಂತರದಲ್ಲಿ ಯು ಮುಂಬಾಗೆ ಸೋಲುಣಿಸುವಲ್ಲಿ ಯಶಸ್ವಿಯಾಯಿತು.
ಲೀಗ್ನ 22 ಪಂದ್ಯಗಳ ಕೋಟಾದಲ್ಲಿ ಯುಪಿ ಯೋಧಾ 10 ಗೆಲುವು 9 ಸೋಲು ಮತ್ತು 3 ಟೈಗಳ ನೆರವಿನಿಂದ 68 ಅಂಕ ಪಡೆದು ಪ್ಲೇ ಆಫ್ಗೆ ಪ್ರವೇಶ ಪಡೆಯಿತು. ಇನ್ನು ಯು ಮುಂಬಾ 21 ಪಂದ್ಯಗಳಲ್ಲಿ 7 ಗೆಲುವು, 9 ಸೋಲು 5 ಟೈ ಸಹಿತ 54 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿ ಉಳಿಯಿತು. ಮುಂಬೈ ತನ್ನ ಕೊನೆಯ ಪಂದ್ಯವನ್ನು ಗುಜರಾತ್ ಜೈಂಟ್ಸ್ ವಿರುದ್ಧ ಆಡಲಿದೆ.
ಇನ್ನು ಈ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಯೋಧಾ 18-12ರಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಕಮ್ಬ್ಯಾಕ್ ಮಾಡಿದ ಮುಂಬೈ ಎದುರಾಳಿಯನ್ನು ಆಲೌಟ್ ಮಾಡಿ ಅಂಕಗಳ ಅಂತರವನ್ನು 20-20ರ ಸಮಬಲಕ್ಕೆ ತಂದಿತ್ತು. ಕೊನೆಯ ಎರಡು ನಿಮಿಷಗಳವರೆಗೂ ಎರಡೂ ತಂಡಗಳು 27-27ರಲ್ಲಿ ಸಮಬಲ ಸಾಧಿಸಿದ್ದವು. ಆದರೆ ಕೊನೆಯ ಎರಡೂ ನಿಮಿಷದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿ ಮುಂಬೈ ತಂಡವನ್ನು ಆಲೌಟ್ ಮಾಡುವ ಮೂಲಕ ಜಯ ಸಾಧಿಸಿತು.
ಸುರೇಂದರ್ ಗಿಲ್ 8, ಪರ್ದೀಪ್ ನರ್ವಾಲ್ 6, ಡಿಫೆಂಡರ್ಗಳಾದ ಆಶು ಸಿಂಗ್, ಶುಭಮ್ ಕುಮಾರ್, ಸುಮಿತ್ ತಲಾ 3, ನಿತೇಶ್ ಕುಮಾರ್, ಗುರ್ದೀಪ್ ತಲಾ 2 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮುಂಬೈ ಪರ ರೈಡರ್ಗಳಾದ ವಿ. ಅಜೀತ್ ಕುಮಾರ್ 5, ಅಭಿಷೇಕ್ ಸಿಂಗ್ ಸಿಂಗ್ 4 ಅಂಕ ಪಡೆದರೆ, ಡಿಫೆಂಡರ್ಗಳಾದ ರಿಂಕು 5 ಮತ್ತು ಹರೀಂದರ್ ಕುಮಾರ್ 4 ಅಂಕ ಪಡೆದರು.
ಇದನ್ನೂ ಓದಿ:ಇಂದು ತನ್ನ ಕೊನೆಯ ಪಂದ್ಯದಲ್ಲಿ ಹರಿಯಾಣ ತಂಡದೊಂದಿಗೆ ಬುಲ್ಸ್ ಸೆಣಸಾಟ... ಗೆದ್ದರಷ್ಟೇ ಪ್ಲೇ ಆಫ್ ಚಾನ್ಸ್!