ಬೆಂಗಳೂರು: ಸೆಮಿಫೈನಲ್ ಮೇಲೆ ಕಣ್ಣಿಟ್ಟಿರುವ ಬೆಂಗಳೂರು ಬುಲ್ಸ್ ಇಂದು ನಡೆಯುವ 2ನೇ ಎಲಿಮಿನೇಟರ್ನಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಕಣಕ್ಕಿಳಿಯುತ್ತಿದೆ. ಟೂರ್ನಿಯಲ್ಲಿ ಅಮೋಘ ಆರಂಭ ಪಡೆದಿದ್ದ ಬೆಂಗಳೂರು ಬುಲ್ಸ್ 22 ಪಂದ್ಯಗಳಿಂದ 11 ಗೆಲುವು 9 ಸೋಲು ಮತ್ತು 2 ಟೈ ಸಾಧಿಸಿ ಒಟ್ಟು 66 ಅಂಕ ಪಡೆದುಕೊಂಡು 5ನೇ ಸ್ಥಾನದಲ್ಲಿದ್ದರೆ, ಎದುರಾಳಿ ಗುಜರಾತ್ 22 ಪಂದ್ಯಗಳನ್ನಾಡಿ 10 ಗೆಲುವು, 8 ಸೋಲು ಮತ್ತು 4 ಟೈ ಸಾಧಿಸಿ ಒಟ್ಟು 67 ಅಂಕ ಪಡೆದು 4ನೇ ಸ್ಥಾನ ಪಡೆದುಕೊಂಡಿದೆ.
ಲೀಗ್ನಲಲ್ಲಿನ 2 ಮುಖಾಮುಖಿಯಲ್ಲಿ ಎರಡೂ ತಂಡಗಳು ತಲಾ ಒಂದು ಜಯ ಮತ್ತು ಸೋಲು ಕಂಡಿವೆ. ಮೊದಲ ಮುಖಾಮುಖಿಯಲ್ಲಿ ಬುಲ್ಸ್ 46-37ರಲ್ಲಿ ಜಯ ಸಾಧಿಸಿದರೆ, 2ನೇ ಮುಖಾಮುಖಿಯಲ್ಲಿ ಜೈಂಟ್ಸ್ 40-36ರಲ್ಲಿ ಗೆಲುವಿನ ನಗೆ ಬೀರಿತ್ತು.
ಬೆಂಗಳೂರು ಪರ ನಾಯಕ ಪವನ್ ಶೆರಾವತ್ ಅದ್ಭುತ ಫಾರ್ಮ್ನಲ್ಲಿದ್ದು, ಟೂರ್ನಿಯಲ್ಲಿ 289 ಅಂಕ ಪಡೆದಯ ಅತಿ ಹೆಚ್ಚು ಅಂಕ ಪಡೆದ ಆಟಗಾರರಾಗಿದ್ದಾರೆ. ಇವರಿಗೆ ಸಾಥ್ ನೀಡುತ್ತಿರುವ ಯುವ ರೈಡರ್ ಭರತ್ 119 ಅಂಕ ಪಡೆದಿದ್ದಾರೆ. ಇನ್ನು ಡಿಫೆಂಡಿಗ್ನಲ್ಲಿ ಗರಿಷ್ಠ ಅಂಕ ಪಡೆದ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಸೌರಭ್ ನಂಡಲ್(66) ಮತ್ತು ಕಳೆದ ಪಂದ್ಯದಲ್ಲಿ ಮಿಂಚಿದ ಅಮನ್(47) ತಂಡದ ಬಲವಾಗಿದ್ದಾರೆ.