ಬೆಂಗಳೂರು : 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನಲ್ಲಿ ಕನ್ನಡಿಗ ಪ್ರಶಾಂತ್ ಕುಮಾರ್ ರೈ ನೇತೃತ್ವದ ಪಾಟ್ನಾ ಪೈರೇಟ್ಸ್ ತಂಡದ ಪ್ರಾಬಲ್ಯ ಮುಂದುವರಿದಿದೆ. ಮಂಗಳವಾರ ನಡೆದ ಯು ಮುಂಬಾ ವಿರುದ್ದದ ಪಂದ್ಯದಲ್ಲಿ 47-36ರ ಅಂತರದಲ್ಲಿ ಜಯ ಸಾಧಿಸಿ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಬಲ ಪಡಿಸಿಕೊಂಡಿದೆ.
ಮೊದಲಾರ್ಧದಲ್ಲೇ ಮೊದಲ ಆರಂಭದಲ್ಲಿ ಎರಡೂ ತಂಡಗಳು ಅತ್ಯುತ್ತಮ ಪೈಪೋಟಿ ನೀಡಿ ತಲಾ ಒಮ್ಮೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದವು. ಒಂದು ಹಂತದಲ್ಲಿ ಪಾಟ್ನಾ 16-14ರಲ್ಲಿ ಕೇವಲ 2 ಅಂಕಗಳ ಮುನ್ನಡೆ ಸಾಧಿಸಿತ್ತು. ಆದರೆ, ಮತ್ತೆ ಸಚಿನ್ ತನ್ವರ್ 4 ಅಂಕ ಪಡೆಯುವುದರೊಂದಿಗೆ ಮುಂಬೈ ತಂಡವವನ್ನು ಮೊದಲಾರ್ಧದ ಅಂತ್ಯದ ವೇಳೆಗೆ 2ನೇ ಬಾರಿ ಆಲೌಟ್ ಮಾಡಿ 26-14 ಮುನ್ನಡೆಯನ್ನು ಹೆಚ್ಚಿಸಿಕೊಂಡರು.
ದ್ವಿತೀಯಾರ್ಧದಲ್ಲೂ ಪ್ರಾಬಲ್ಯ ಮುಂದುವರಿಸಿದ ಪ್ರಶಾಂತ್ ಪಡೆ ಯು ಮುಂಬಾ ತಂಡವನ್ನು ಮತ್ತೊಮ್ಮೆ ಆಲೌಟ್ ಮಾಡಿ ಒಟ್ಟಾರೆ ಪಂದ್ಯದಲ್ಲಿ 47-36 ಅಂತರದಲ್ಲಿ ಜಯ ಸಾಧಿಸಿತು. ಸಚಿನ್ 16, ಗುಮನ್ ಸಿಂಗ್ 11 ಅಂಕ ಪಡೆದರೆ, ಡಿಫೆಂಡರ್ ನೀರಜ್ ಕುಮಾರ್ 3, ಮೊಹಮ್ಮದ್ರೇಜಾ2 ಅಂಕ ಪಡೆದರು.