ಹೈದರಾಬಾದ್: ಪ್ರೋ ಕಬಡ್ಡಿ ಟೂರ್ನಿಯ 6 ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಯುಪಿ ಯೋಧರಿಗೆ ಹೀನಾಯ ಸೋಲಾಗಿದೆ. ರೈಡಿಂಗ್ ಹಾಗು ಡಿಫೆಂಡಿಂಗ್ ಎರಡಲ್ಲೂ ಮಿಂಚಿದ ಬೆಂಗಾಲ್ ತಂಡ 48-17 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ.
ವಾರಿಯರ್ಸ್ ತಂಡ ಯುಪಿ ಯೋಧ ತಂಡವನ್ನು 4 ಬಾರಿ ಆಲೌಟ್ ಮಾಡುವ ಮೂಲಕ ಅದ್ಭುತ ಆಟ ಪ್ರದರ್ಶಿಸಿತು.
ವಾರಿಯರ್ ತಂಡದ ರೈಡರ್ ಇಸ್ಮಾಯಿಲ್ ನಬಿಬಕ್ಷ್ 10 ಅಂಕಗಳಿಸಿ ಸೂಪರ್ ರೈಡರ್ ಎನಿಸಿಕೊಂಡರು. ಇವರಿಗೆ ಸಾಥ್ ನೀಡಿದ ಮಣಿಂದರ್ ಸಿಂಗ್ 9 ಅಂಕ ಹಾಗೂ ಕೆ ಪ್ರಪಂಜನ್ 5 ಅಂಕ ಸಂಪಾದಿಸಿದರು. ಡಿಫೆಂಡಿಂಗ್ ವಿಭಾಗದಲ್ಲಿ ಬಲ್ದೇವ್ ಸಿಂಗ್ 7, ರಿಂಕು ನರ್ವಾಲ್ 4, ಜೀವಾ ಕುಮಾರ್ 3 ಅಂಕ ಗಿಟ್ಟಿಸಿಕೊಂಡರು.
ಏಕಪಕ್ಷೀಯವಾಗಿ ನಡೆದ ಈ ಪಂದ್ಯದಲ್ಲಿ ಯುಪಿ ಯೋದ ತಂಡ ವಾರಿಯರ್ ವಿರುದ್ಧ ಪ್ರತಿರೋಧ ಒಡ್ಡಲು ಯಾವುದೇ ಹಂತದಲ್ಲೂ ಸಾಧ್ಯವಾಗಲಿಲ್ಲ. ಮೋನು ಗೋಯಟ್ 6 ಅಂಕ ಪಡೆದರೆ ಸುರೇಂದರ್ ಸಿಂಗ್ 3 ನಿತೀಸ್ ಕುಮಾರ್ 3 ಅಂಕ ಪಡೆದರು.