ಬೆಂಗಳೂರು: ತೆಲುಗು ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ 35 ಸೆಕೆಂಡ್ಗಳ ಆಟದಲ್ಲಿ ಅದ್ಭುತ ಆಟವಾಡಿದ ಬೆಂಗಳೂರು ಬುಲ್ಸ್ ಸೋಲುತ್ತಿದ್ದ ಪಂದ್ಯವನ್ನು ರೋಚಕ ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕಳೆದ ಮೂರು ಪಂದ್ಯಗಳಲ್ಲಿ ಮಿಂಚಿನಂತೆ ರೈಡಿಂಗ್ ಮಾಡಿ ಬುಲ್ಸ್ಗೆ ಜಯ ತಂದುಕೊಟ್ಟಿ ಪವನ್, ಇಂದು ಟೈಟನ್ಸ್ ಎದುರು ಮಂಕಾದರು. ಅವರು ಕೇವಲ 3 ಟಚ್ ಪಾಯಿಂಟ್ ಸಹಿತ 8 ಅಂಕ ಗಳಿಸಲು ಮಾತ್ರ ಸಾಧ್ಯವಾಯಿತು. ಪಂದ್ಯದಲ್ಲಿ 20ಕ್ಕೂ ಹೆಚ್ಚು ನಿಮಿಷ ಹೊರಗೆ ಕಾಲ ಕಳೆದಿದ್ದರಿಂದ ಪಂದ್ಯವನ್ನು ಗೆಲ್ಲುವ ಅವಕಾಶ ಕೈತಪ್ಪಿತು.
ಅರಂಭದಿಂದ ಕೊನೆ 2 ನಿಮಿಷದವರೆಗೆ ಎರಡೂ ತಂಡಗಳ ನುಡುವೆ ಸಮಬಲ ಹೋರಾಟ ಕಂಡುಬಂದಿತ್ತು. ಆದರೆ ಒಂದುವರೆ ನಿಮಿಷವಿದ್ದ ಸಂದರ್ಭದಲ್ಲಿ ಟೈಟನ್ಸ್ ತಂಡದ ಆದರ್ಶ್ ಸೂಪರ್ ರೈಡ್ ಮಾಡಿ ಟೈಟನ್ಸ್ಗೆ 3 ಅಂಕ ಮುನ್ನಡೆ ತಂದುಕೊಟ್ಟರು. ಕೊನೆಯ 35 ಸೆಕೆಂಡ್ ಇರುವಾಗ ಬುಲ್ಸ್ ಆಲೌಟ್ ಆಗಿ 31-34ರ ಅಂಕಗಳ ಹಿನ್ನೆಡೆ ಅನುಭವಿಸಿತ್ತು.
ಆದರೆ 10 ಅಂಕ ಪಡೆದು ಉತ್ತಮ ಲಯದಲ್ಲಿದ್ದ ಅಂಕಿತ್ರನ್ನು ಮಹೇಂದರ್ ಟ್ಯಾಕಲ್ ಮಾಡಿದರು. ನಂತರ ಮಿಂಚಿನ ವೇಗದಲ್ಲಿ ರೈಡ್ ಮಾಡಿದ ಪವನ್ 3 ಸೆಕೆಂಡ್ ಉಳಿದಿರುವಂತೆ ಒಂದು ಅಂಕ ಪಡೆದು ಅಂತರವನ್ನು 33-34ಕ್ಕೆ ತಂದು ನಿಲ್ಲಿಸಿದರು. ಕೊನೆಯಲ್ಲಿ ರೈಡಿಂಗ್ ಬಂದ ಮಾಜಿ ಬುಲ್ಸ್ ಆಟಗಾರ ರೋಹಿತ್ ಕುಮಾರ್ರನ್ನು ಬಾಕ್ಲೈನ್ ದಾಟದಂತೆ ತಡೆದರಲ್ಲದೆ ಪವನ್ ಅದ್ಭುತವಾಗಿ ಟ್ಯಾಕಲ್ ಮಾಡಿ ಸೋಲುತ್ತಿದ್ದ ಪಂದ್ಯವನ್ನು ಟೈನಲ್ಲಿ ಅಂತ್ಯವಾಗುವಂತೆ ಮಾಡಿದರು.