ಬೆಂಗಳೂರು:ಪವನ್ ಶೆರಾವತ್ ಅಬ್ಬರದ ರೈಡಿಂಗ್ ಮತ್ತು ಡಿಫೆಂಡರ್ಗಳ ಅದ್ಭುತ ಪ್ರದರ್ಶನದಿಂದ ಬೆಂಗಳೂರು ಬುಲ್ಸ್ 61-22 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಅನುಭವಿ ಡಿಫೆಂಡಿರ್ಗಳನ್ನು ಹೊಂದಿದ್ದ ಡೆಲ್ಲಿ ತಂಡ ಪವನ್ ಆರ್ಭಟವನ್ನು ಯಾವುದೇ ಹಂತದಲ್ಲಿಯೂ ತಡೆಯಲು ಸಾಧ್ಯವಾಗದೆ 5 ಬಾರಿ ಆಲೌಟ್ ಆಗುವ ಮೂಲಕ ಹೀನಾಯ ಸೋಲುಕಂಡಿದೆ.
ಬುಧವಾರ ನಡೆದ 2ನೇ ಪಂದ್ಯದಲ್ಲಿ ಸ್ಟಾರ್ ರೈಡರ್ ನವೀನ್ ಕುಮಾರ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ದಬಾಂಗ್ ಡೆಲ್ಲಿ ಡಿಫೆಂಡಿಂಗ್ ಮತ್ತು ರೈಡಿಂಗ್ ಎರಡರಲ್ಲೂ ಟೂರ್ನಿಯಲ್ಲೇ ತೀರಾ ಕಳಪೆ ಪ್ರದರ್ಶನ ತೋರಿತು.
ಇತ್ತ ರೈಡಿಂಗ್ನಲ್ಲಿ ಪವನ್ ಅಬ್ಬರಿಸುತ್ತಿದ್ದರೆ, ಅತ್ತ ಬುಲ್ಸ್ ಡಿಫೆಂಡರ್ಗಳು ಡೆಲ್ಲಿಯ ರೈಡರ್ಗಳನ್ನು ಹಿಂದಿರುಗಲು ಬಿಡದೆ ತಮ್ಮ ಬಲೆಗೆ ಬೀಳಿಸಿಕೊಳ್ಳವಲ್ಲಿ ಯಶಸ್ವಿಯಾದರು. ಮೊದಲಾರ್ಧದಲ್ಲಿ 3 ಬಾರಿ ಆಲೌಟ್ ಮಾಡಿದ ಬುಲ್ಸ್ ಒಟ್ಟಾರೆ ಪಂದ್ಯದಲ್ಲಿ ಡೆಲ್ಲಿಯನ್ನು 5 ಬಾರಿ ಆಲೌಟ್ ಮಾಡುವ ಬರೋಬ್ಬರಿ 39 ಅಂಕಗಳ ಅಂತರದಿಂದ ಜಯ ಸಾಧಿಸಿತು. ಇದು ಈ ವರ್ಷದ ಗರಿಷ್ಠ ಅಂತರದ ಗೆಲುವಾಯಿತು. ಪವನ್ ಶೆರಾವತ್ 27 ಅಂಕ ಪಡೆದು ಟೂರ್ನಿಯಲ್ಲೇ ಗರಿಷ್ಠ ಅಂಕ ಪಡೆದ ರೈಡರ್ ಎನಿಸಿಕೊಂಡರು.
ಪವನ್ 22 ಟಚ್ ಪಾಯಿಂಟ್ ಮತ್ತು 5 ಬೋನಸ್ ಸಹಿತ 27 ಅಂಕ ಪಡೆದು ಮಿಂಚಿದರೆ, ಭರತ್ 2 ಟ್ಯಾಕಲ್ ಸಹಿತ 7, ಚಂದ್ರನ್ ರಂಜಿತ್ 2 ಟ್ಯಾಕಲ್ ಸಹಿತ 5, ಸೌರಭ್ ನಂಡಲ್, ಮಹೇಂದರ್ ಸಿಂಗ್ ಮತ್ತು ಅಮನ್ ತಲಾ 3 ಟ್ಯಾಕಲ್ ಅಂಕ ಪಡೆದು ಬೃಹತ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬುಲ್ಸ್ಗೆ ಆಲೌಟ್ ಮೂಲಕವೇ 10 ಪಾಯಿಂಟ್ ಸಂದಿದ್ದು ಮತ್ತೊಂದು ವಿಶೇಷ.