ಬೆಂಗಳೂರು: ಕಳೆದ 6 ಪಂದ್ಯಗಳಲ್ಲಿ 5 ರಲ್ಲಿ ಸೋಲು ಕಂಡಿದ್ದ ಬೆಂಗಳೂರು ಬುಲ್ಸ್ ಇಂದು ತನ್ನ ಆಕ್ರಮಣ ಕಾರಿ ಆಟವನ್ನು ಬದಿಗೊತ್ತಿ ತಾಳ್ಮೆಯ ಆಟವನ್ನು ಪ್ರದರ್ಶಿಸಿ ಬಲಿಷ್ಠ ಯುಪಿ ತಂಡವನ್ನು 31-26ರಲ್ಲಿ ಮಣಿಸುವ ಮೂಲಕ ಗೆಲುವಿನ ಹಾದಿಗೆ ಮರಳಿದೆ.
ಯು ಮುಂಬಾ ಮತ್ತು ತಮಿಳ್ ತಲೈವಾಸ್ ವಿರುದ್ಧ ಹೀನಾಯ ಪ್ರದರ್ಶನ ತೋರಿ ಭಾರಿ ಅಂತರದಿಂದ ಸೋಲು ಕಂಡಿದ್ದ ಪವನ್ ಪಡೆ, ಇಂದಿನ ಪಂದ್ಯದಲ್ಲಿ ಆರಂಭದಿಂದ ಅಂತ್ಯದವರೆಗೆ ಎಚ್ಚರಿಕೆಯಿಂದ ಆಡಿತು. ಮೊದಲ ಹತ್ತು ನಿಮಿಷದೊಳಗೆ ಯೋಧ ತಂಡವನ್ನು ಆಲ್ ಔಟ್ ಮಾಡಿದ ಬುಲ್ಸ್ ಮೊದಲಾರ್ಧದ ವೇಳೆಗೆ 19-13ರಲ್ಲಿ ಮುನ್ನಡೆ ಪಡೆದುಕೊಂಡಿತು. ಅದೇ ಮುನ್ನಡೆಯನ್ನು ಕೊನೆಯವರೆಗೂ ಕಾಯ್ದುಕೊಳ್ಳವಲ್ಲಿ ಯಶಸ್ವಿಯಾಯಿತು.
ಬೆಂಗಳೂರು ಪರ ಪವನ್ ಶೆರಾವತ್ 9 ಅಂಕ ಪಡೆದರೆ, ಇವರಿಗೆ ಸಾಥ್ ನೀಡಿದ ಭರತ್ 6 ಅಂಕ ಪಡೆದರು. ಅಮನ್ 7 ಟ್ಯಾಕಲ್ ಅಂಕ ಪಡೆದು ಯುಪಿ ರೈಡರ್ಗಳ ವಿರುದ್ಧ ಪ್ರಾಬಲ್ಯ ಸಾಧಿಸಿದರು. ಸೌರಭ್ ನಂಡಲ್ 3 , ಅಂಕಿತ್ 2 ಆಂಕ ಪಡೆದರು.