ಬೆಂಗಳೂರು: ಬಲಿಷ್ಠ ಯುಂಬಾ ವಿರುದ್ಧ ಅಮೋಘ ಪ್ರದರ್ಶನ ತೋರಿದ ಪಾಟ್ನಾ ಪೈರೇಟ್ಸ್ 43-23 ಅಂಕಗಳ ಭಾರಿ ಅಂತರದಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅಲ್ಲದೆ 4 ವರ್ಷಗಳ ನಂತರ ಮುಂಬೈ ತಂಡದ ವಿರುದ್ಧ ಪಾಟ್ನಾ ಮೊದಲ ಗೆಲುವು ದಾಖಲಿಸಿದೆ.
ಮಂಗಳವಾರ ನಡೆದ 47ನೇ ಪಂದ್ಯದಲ್ಲಿ ಪಾಟ್ನಾ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಏಳೇ ನಿಮಿಷದಲ್ಲಿ ಮುಂಬೈ ತಂಡವನ್ನು ಮೊದಲ ಬಾರಿಗೆ ಆಲೌಟ್ ಮಾಡಿದ ಫಾಟ್ನಾ ಮೊದಲಾರ್ಧದಲ್ಲಿ 19-9ರಲ್ಲಿ ಮುನ್ನಡೆ ಪಡೆದುಕೊಂಡಿತ್ತು. ದ್ವಿತೀಯಾರ್ಧದಲ್ಲೂ ತನ್ನ ಆರ್ಭಟ ಮುಂದುವರಿಸಿದ ಪ್ರಶಾಂತ್ ಬಳಗ 22ನೇ ನಿಮಿಷದಲ್ಲಿ 2ನೇ ಬಾರಿ ಮುಂಬೈ ತಂಡವನ್ನು ಆಲೌಟ್ ಮಾಡಿ 23-9ಕ್ಕೆ ತನ್ನ ಮುನ್ನಡೆಯನ್ನು ಹೆಚ್ಚಿಸಿಕೊಂಡಿತು. ಕೊನೆಯಲ್ಲಿ ಮುಂಬೈ ಹೋರಾಟ ನೀಡಿತಾದರೂ ಸೋಲಿನ ಅಂತವನ್ನು ಮಾತ್ರ ಕಡಿಮೆ ಮಾಡಲು ಸಾಧ್ಯವಾಯಿತು.
ಪಾಟ್ನಾ ಪರ ಡಿಪೆಂಡರ್ ನೀರಜ್ ಚೋಪ್ರಾ 8 ಅಂಕ ಪಡೆದು ಮುಂಬಾ ರೈಡರ್ಗಳನ್ನು ಪರದಾಡುವಂತೆ ಮಾಡಿದರು. ಪ್ರಶಾಂತ್ ಮತ್ತು ಸಚಿನ್ ರೈಡಿಂಗ್ನಲ್ಲಿ ತಲಾ 7 ಅಂಕ ಪಡೆದು ಮಿಂಚಿದರು. ಆಲ್ರೌಂಡ್ ಪ್ರದರ್ಶನ ತೋರಿದ ಮೋನು 2 ಟ್ಯಾಕಲ್ ಅಂಕಗಳೊಂದಿಗೆ 6 ಮತ್ತು ಡಿಫೆಂಡರ್ ಮೊಹಮ್ಮದ್ರೇಜಾ 4 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.