ಕರ್ನಾಟಕ

karnataka

By

Published : May 20, 2022, 8:10 AM IST

ETV Bharat / sports

ಚಿನ್ನದ ಹುಡುಗಿ ನಿಖತ್ ಜರೀನ್: ಹರ್ಷ ವ್ಯಕ್ತಪಡಿಸಿದ ಪೋಷಕರು, ಶುಭ ಕೋರಿದ ಪ್ರಧಾನಿ

ಗುರುವಾರದಂದು ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದ ಫ್ಲೈ-ವೇಟ್ ಫೈನಲ್‌ ಬಾಕ್ಸಿಂಗ್‌ನಲ್ಲಿ ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನ 52 ಕೆ.ಜಿ ವಿಭಾಗದಲ್ಲಿ ನಿಖತ್ ಜರೀನ್ ಚಿನ್ನದ ಪದಕ ಗೆದ್ದರು. ಈ ಮೂಲಕ ಮೇರಿ ಕೋಮ್, ಸರಿತಾ ದೇವಿ, ಜೆನ್ನಿ ಆರ್‌ಎಲ್ ಮತ್ತು ಲೇಖಾ ಕೆ.ಸಿ.ನಂತರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಐದನೇ ಭಾರತೀಯ ಮಹಿಳಾ ಬಾಕ್ಸರ್ ಆಗಿ ಹೊರಹೊಮ್ಮಿದ್ದಾರೆ.

ನಿಖತ್ ಜರೀನ್
ನಿಖತ್ ಜರೀನ್

ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಇಡೀ ದೇಶದ ಮಚ್ಚುಗೆ ಗಳಿಸಿದ ನಿಖತ್ ಜರೀನ್ ಮಧ್ಯಮ ವರ್ಗದ ಮತ್ತು ಸಂಪ್ರದಾಯವಾದಿ ಮುಸ್ಲಿಂ ಕುಟುಂಬದಿಂದ ಬಂದವರು. ಸತತ 13 ವರ್ಷಗಳ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದ ಫಲವಾಗಿ ನಿನ್ನೆ ಅವರು ಮೇರು ಸಾಧನೆಗೈದಿದ್ದಾರೆ. ಜಮೀಲ್ ಮತ್ತು ಪರ್ವೀನ್ ಸುಲ್ತಾನಾ ಅವರ ನಾಲ್ವರು ಹೆಣ್ಣು ಮಕ್ಕಳಲ್ಲಿ ನಿಖತ್ ಮೂರನೆಯವರು. ಮಗಳ ಗೆಲುವಿಗೆ ಪೋಷಕರು ಮತ್ತು ಮೂವರು ಸಹೋದರಿಯರು ಹರ್ಷ ವ್ಯಕ್ತಪಡಿಸಿದ್ದು, ಶುಭ ಕೋರಿದ್ದಾರೆ.

2010ರಲ್ಲಿ ಕರೀಂನಗರದಲ್ಲಿ ನಡೆದ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ನಿಖತ್ ಜರೀನ್ ಚಿನ್ನ ಗೆದ್ದಿದ್ದರು. ಆ ನಂತರ ಪಂಜಾಬ್‌ನಲ್ಲಿ ನಡೆದ ರಾಷ್ಟ್ರೀಯ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಅಲ್ಲಿಯೂ ಸಹ ಚಿನ್ನದ ಪದಕ ಪಡೆದರು. ತಮಿಳುನಾಡಿನಲ್ಲಿ ನಡೆದ ಸಬ್ ಜೂನಿಯರ್ ರಾಷ್ಟ್ರೀಯ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ನಂತ್ರ ಯಶಸ್ಸಿನ ಪಯಣ ಮುಂದುವರೆಸಿದರು.

ಭಾರತೀಯ ಮಹಿಳಾ ಬಾಕ್ಸರ್​ಗಳ ಸಾಧನೆಯ ಹಾದಿ.. :ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್​ನಲ್ಲಿ ಆರು ಬಾರಿ ಮೇರಿ ಕೋಮ್ ಚಿನ್ನ ಗೆದ್ದಿದ್ದಾರೆ. (2002, 2005, 2006, 2008, 2010 ಮತ್ತು 2018), ಸರಿತಾ ದೇವಿ (2006), ಜೆನ್ನಿ (2006), ಲೇಖಾ ಕೆ.ಸಿ.(2006) ನಂತರ ನಿಖತ್ ಜರೀನ್ (2022) ಚಿನ್ನದ ಪದಕ ಗಳಿಸಿದ ಏಕೈಕ ಐದನೇ ಭಾರತೀಯ ಮಹಿಳೆಯಾಗಿದ್ದಾರೆ.

ಶುಭಕೋರಿದ ಪ್ರಧಾನಿ, ಕೆಸಿಆರ್​: ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿ, ನಮ್ಮ ಬಾಕ್ಸರ್‌ಗಳು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅದ್ಭುತ ಆಟವಾಡಿ ಚಿನ್ನದ ಪದಕ ಗಳಿಸಿದ ನಿಖತ್ ಜರೀನ್‌ಗೆ ಅಭಿನಂದನೆಗಳು. ಹಾಗೆಯೇ, ಇದೇ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವ ಮನೀಶಾ ಮೌನ್ ಮತ್ತು ಪರ್ವೀನ್ ಹೂಡಾ ಅವರನ್ನು ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಕೂಡ ಟ್ವೀಟ್​ ಮೂಲಕ ಅಭಿನಂದನೆ ಸಲ್ಲಿಸಿದ್ದು, ಪ್ರತಿಷ್ಠಿತ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್​ನಲ್ಲಿ ಬಂಗಾರದ ಪದಕ ಗಳಿಸಿದ ಜರೀನ್‌ಗೆ ಶುಭಾಶಯಗಳು ಎಂದಿದ್ದಾರೆ.

ABOUT THE AUTHOR

...view details