ನವದೆಹಲಿ: 2023ರ ವಿಶ್ವ ಚಾಂಪಿಯನ್ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಶೀತಲ್ ದೇವಿ ಅವರು ಶುಕ್ರವಾರ ವಿಶ್ವ ಆರ್ಚರಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರು ಮೊದಲ ಭಾರತೀಯ ಬಿಲ್ಲುಗಾರ್ತಿ ಎನಿಸಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಿಂದ ಬಂದಿರುವ ಶೀತಲ್ ದೇವಿ ಅವರು ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಸಂಯುಕ್ತ ಮಹಿಳಾ ವಿಭಾಗ ಮತ್ತು ಪ್ಯಾರಾ ಆರ್ಚರಿ ವಿಶ್ವ ಚಾಂಪಿಯನ್‌ಶಿಪ್ ಅನ್ನು ಗೆಲ್ಲುವ ಅಸಾಮಾನ್ಯ ಪ್ರದರ್ಶನಕ್ಕಾಗಿ ವರ್ಷದ ಅತ್ಯುತ್ತಮ ಮಹಿಳಾ ಪ್ಯಾರಾ ಆರ್ಚರ್ ಎಂದು ಗೌರವಿಸಲ್ಪಟ್ಟಿದ್ದಾರೆ.
2023ರ ವರ್ಷದ ಕ್ರೀಡಾಪಟುಗಳ ಪ್ರಶಸ್ತಿ ವಿಜೇತರನ್ನು ನಿರ್ಧಾರ ಮಾಡಲು ಆರು ವಿಭಾಗಗಳಲ್ಲಿ ಆರ್ಚರಿ ಕ್ರೀಡೆಯನ್ನು ವರ್ಗೀಕರಿಸಲಾಗಿತ್ತು. ಸಾರ್ವಜನಿಕರು, ಸಾಂಸ್ಥೆಗಳು ಮತ್ತು ಪತ್ರಿಕಾ ಮತದಿಂದ ಪ್ರಶಸ್ತಿಯ ಬಗ್ಗೆ ನಿರ್ಧರಿಸಲಾಗಿದೆ. ಈ ಮತದಾನ ಪ್ರಕ್ರಿಯೆ ನವೆಂಬರ್ ಮಧ್ಯದಲ್ಲಿ ಪ್ರಾರಂಭವಾಗಿ ಒಂದು ತಿಂಗಳ ಕಾಲ ನಡೆಯಿತು. ಮತದಾನದ ಅಂತಿಮ ದಿನಕ್ಕೆ ಒಟ್ಟು 7,50,000 ಮತಗಳು ಚಲಾವಣೆಯಾಗಿದ್ದವು.
ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಎರಡು ಚಿನ್ನ ಮತ್ತು ಒಂದು ಬೆಳ್ಳಿ ಒಳಗೊಂಡ ಮೂರು ಪ್ಯಾರಾ ಏಷ್ಯನ್ ಗೇಮ್ಸ್ ಪದಕಗಳನ್ನು ಗೆದ್ದುಕೊಂಡಿದ್ದರಿಂದ 16 ವರ್ಷದ ಶೀತಲ್ ದೇವಿ 2023ರಲ್ಲಿ ಅಸಾಧಾರಣ ಸಾಧನೆ ಮಾಡಿದರು. ಅವರು ಈ ವರ್ಷದ ಆರಂಭದಲ್ಲಿ ವಿಶ್ವ ಪ್ಯಾರಾ ಆರ್ಚರಿ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದರು ಮತ್ತು ಪ್ಯಾರಾ ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಗೆದ್ದರು.